ರಾಜ್ಯದಲ್ಲಿ ಮಳೆ ಆರ್ಭಟಕ್ಕೆ 5 ಬಲಿ : ಕೊಡಗು, ಮಲೆನಾಡು, ಘಟ್ಟದಲ್ಲಿ ಭಾರಿ ಮಳೆ ಮುಂದುವರಿಕೆ

| Published : Jul 28 2024, 11:46 AM IST

Karnataka Rain and Water Inflows

ಸಾರಾಂಶ

ಕೊಡಗು, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಶನಿವಾರ ಐವರು ಮೃತಪಟ್ಟಿದ್ದಾರೆ.

ಬೆಂಗಳೂರು: ಕೊಡಗು, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮಳೆ ಸಂಬಂಧಿ ದುರ್ಘಟನೆಗಳಲ್ಲಿ ಶನಿವಾರ ಐವರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಮನೆಗೆ ನೀರು ನುಗ್ಗಿದ್ದನ್ನು ಕಂಡು ಹೃದಯಾಘಾತಕ್ಕೊಳಗಾಗಿ ದಶರಥ ಬಂಢಿ (72) ಸಾವನ್ನಪ್ಪಿದ್ದಾರೆ.

 ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನಲ್ಲಿ ನದಿಗೆ ಬಿದ್ದು ವೃದ್ಧೆಯೊಬ್ಬಳು ಅಸುನೀಗಿದ್ದಾಳೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ ಮೇವು ತರಲು ಹೋದ ಸಿದ್ದಪ್ಪ ಅಡೊಳ್ಳಿ (65) ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಧಾರವಾಡ ತಾಲೂಕಿನಲ್ಲಿ ಮನೆಯ ಗೋಡೆ ಕುಸಿದು ಯಲ್ಲಪ್ಪ (62) ಅಸುನೀಗಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ ಮನೆ ಕುಸಿದು ಹರಕುಣಿ (60) ಸಾವನ್ನಪ್ಪಿದ್ದಾರೆ.