ಮಹಿಳಾ ನೌಕರರಿಗೆ ವರ್ಷಕ್ಕೆ 6 ದಿನ ಮುಟ್ಟಿನ ರಜೆ: ಚಿಂತನೆ - ಜನಾಭಿಪ್ರಾಯ ಪಡೆದು ತೀರ್ಮಾನ

| Published : Sep 22 2024, 01:01 PM IST / Updated: Sep 22 2024, 01:02 PM IST

periods

ಸಾರಾಂಶ

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ ಕನಿಷ್ಠ 6 ದಿನ ವೇತನ ಸಹಿತ ಮುಟ್ಟಿನ ರಜೆ (ಪಿಎಂಎಲ್‌) ನೀಡುವ ಋತುಸ್ರಾವದ ರಜೆ ನೀತಿ ಜಾರಿಗೆ ಸರ್ಕಾರ ಚಿಂತನೆ  

ಬೆಂಗಳೂರು :  ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ ಕನಿಷ್ಠ 6 ದಿನ ವೇತನ ಸಹಿತ ಮುಟ್ಟಿನ ರಜೆ (ಪಿಎಂಎಲ್‌) ನೀಡುವ ಋತುಸ್ರಾವದ ರಜೆ ನೀತಿ ಜಾರಿಗೆ ಸರ್ಕಾರ ಚಿಂತನೆ ನಡೆಸಿದ್ದು, ಈ ಬಗ್ಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ನೇತೃತ್ವದಲ್ಲಿ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿ ಚರ್ಚಿಸಲಾಗಿದೆ.

ಈ ವೇಳೆ ಪ್ರಸ್ತಾವನೆಯನ್ನು ವಿಸ್ತೃತವಾಗಿ ಚರ್ಚಿಸಿದ್ದು, ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧಾರ ಮಾಡಿರುವುದಾಗಿ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ.

ಉದ್ಯೋಗಸ್ಥ ಮಹಿಳೆಯರಿಗೆ ಋತುಸ್ರಾವದ ರಜೆ ನೀಡುವ ಸಂಬಂಧ ವರದಿ ನೀಡಲು ಕ್ರೈಸ್ಟ್‌ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಸಪ್ನಾ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯು ಕನಿಷ್ಠ 6 ದಿನ ರಜೆ ನೀಡುವ ಬಗ್ಗೆ ಶಿಫಾರಸು ಮಾಡಿತ್ತು.

ಈ ವರದಿಯಲ್ಲಿನ ಅಂಶಗಳನ್ನು ಮುಂದಿಟ್ಟುಕೊಂಡು ಶನಿವಾರ ಸಭೆ ನಡೆಸಿದ್ದು ಮಹಿಳಾ ಸಂಘಟನೆಗಳ ಪ್ರತಿನಿಧಿಗಳು, ಮಹಿಳಾ ವೈದ್ಯರು, ಕಾರ್ಮಿಕ ಇಲಾಖೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಈ ವೇಳೆ ವಾರ್ಷಿಕ 6 ದಿನ ರಜೆ ನೀಡಬೇಕೆ ಅಥವಾ 12 ದಿನ ರಜೆ ನೀಡಬೇಕೆ ಎಂಬ ಬಗ್ಗೆ ಚರ್ಚೆಯಾಗಿದೆ. ಅಂತಿಮವಾಗಿ ಎಲ್ಲಾ ಇಲಾಖೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆದು ನಿರ್ಧರಿಸಲು ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

 ಅಭಿಪ್ರಾಯ ಸಂಗ್ರಹಿಸಿದ ಬಳಿಕ ನಿರ್ಧಾರ- ಲಾಡ್:   ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸಂತೋಷ್ ಲಾಡ್, ‘ಒಡಿಶಾದಲ್ಲಿ ರಂಜಿತಾ ಎಂಬುವವರು ಸೈಕಲ್‌ ಜಾಥಾದ ಮೂಲಕ ಅರಿವು ಮೂಡಿಸಿದ್ದರು. ರಾಜ್ಯದಲ್ಲಿ ಕವಿತಾ ರೆಡ್ಡಿ ಅವರು ಸಲ್ಲಿಸಿದ್ದ ಮನವಿ ಆಧರಿಸಿ ಸಮಿತಿ ರಚಿಸಿದ್ದೆವು. ವರದಿಯ ಬಗ್ಗೆ ಚರ್ಚಿಸಿದ್ದು, ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಸಾರ್ವಜನಿಕ ಚರ್ಚೆಗೆ ಬಿಡುತ್ತೇವೆ. ಎಲ್ಲಾ ಸಂಘ ಸಂಸ್ಥೆಗಳು, ಕೈಗಾರಿಕೆಗಳು, ಎಲ್ಲಾ ಇಲಾಖೆಗಳಿಗೂ ಪ್ರಸ್ತಾವನೆ ಕಳುಹಿಸುತ್ತೇವೆ. ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಿ ರಜೆ ನೀಡುವ ಬಗ್ಗೆ ತೀರ್ಮಾನ ಮಾಡುತ್ತೇವೆ’ ಎಂದು ಹೇಳಿದರು.

ಋತುಸ್ರಾವ ಸಂಬಂಧ ಆರು ದಿನಗಳ ಕಾಲ ರಜೆ ಕೇಳಿದ್ದಾರೆ. ಶಿಫಾರಸ್ಸು ಮಾಡಿದ ತಕ್ಷಣ ಅಂತಿಮ ತೀರ್ಮಾನ ಆಗುವುದಿಲ್ಲ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಒಳಪಡಿಸಿ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಎಲ್ಲಾ ಇಲಾಖೆ ಸಚಿವರ ಅಭಿಪ್ರಾಯ ಸಂಗ್ರಹ ಮಾಡಿ ಹಣಕಾಸು ಇಲಾಖೆ ಅಭಿಪ್ರಾಯವನ್ನೂ ಪಡೆಯುತ್ತೇವೆ ಎಂದರು.