ರಸ್ತೆಗಿಳಿಯಲಿವೆ 750 ಹೊಸ ಎಲೆಕ್ಟ್ರಿಕ್‌ ಸಾರಿಗೆ ಬಸ್‌ - ಬಿಎಂಟಿಸಿ ಹೊರತುಪಡಿಸಿ ಉಳಿದ ನಿಗಮಗಳಲ್ಲಿ ಸೇವೆ

| N/A | Published : Feb 21 2025, 06:47 AM IST

Ramalingareddy

ಸಾರಾಂಶ

ಕೇಂದ್ರ ಸರ್ಕಾರದ ಫೇಮ್‌ ಇಂಡಿಯಾ ಯೋಜನೆ ಅಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಮತ್ತಷ್ಟು ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲು ಒಪ್ಪಿಗೆ ಸೂಚಿಸಿದ್ದು, ಶೀಘ್ರ ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳಿಗೆ 750 ಎಲೆಕ್ಟ್ರಿಕ್‌ ಬಸ್‌ಗಳು ಸೇರ್ಪಡೆಗೊಳ್ಳಲಿವೆ.

 ಗಿರೀಶ್‌ ಗರಗ

 ಬೆಂಗಳೂರು : ಕೇಂದ್ರ ಸರ್ಕಾರದ ಫೇಮ್‌ ಇಂಡಿಯಾ ಯೋಜನೆ ಅಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಮತ್ತಷ್ಟು ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲು ಒಪ್ಪಿಗೆ ಸೂಚಿಸಿದ್ದು, ಶೀಘ್ರ ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳಿಗೆ 750 ಎಲೆಕ್ಟ್ರಿಕ್‌ ಬಸ್‌ಗಳು ಸೇರ್ಪಡೆಗೊಳ್ಳಲಿವೆ.

ಕಳೆದೆರಡು ವರ್ಷಗಳಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಗೆ ಸೇರ್ಪಡೆಯಾಗುತ್ತಿರುವ ಹೊಸ ಬಸ್‌ಗಳ ಸಂಖ್ಯೆ ಏರಿಕೆಯಾಗುತ್ತಿದೆ. 2023-24 ಮತ್ತು 2024-25ನೇ ಸಾಲಿನಲ್ಲೇ 4,300ಕ್ಕೂ ಹೆಚ್ಚಿನ ಬಸ್‌ಗಳು ನಿಗಮಗಳಿಗೆ ಸೇರ್ಪಡೆಯಾಗುತ್ತಿವೆ.

ಅದರಲ್ಲಿ 1 ಸಾವಿರಕ್ಕೂ ಹೆಚ್ಚಿನ ಎಲೆಕ್ಟ್ರಿಕ್‌ ಬಸ್‌ಗಳಾಗಿದ್ದು, ಅವುಗಳಲ್ಲಿ ಬಹುತೇಕವು ಗ್ರಾಸ್‌ ಕಾಸ್ಟ್ ಕಾಂಟ್ರ್ಯಾಕ್ಟ್‌ (ಜಿಸಿಸಿ) ಮಾದರಿಯದ್ದಾಗಿವೆ. ಇದೀಗ ಮತ್ತೆ ಕೇಂದ್ರ ಸರ್ಕಾರದ ಫೇಮ್‌ ಇಂಡಿಯಾ ಯೋಜನೆ ಅಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 750 ಎಲೆಕ್ಟ್ರಿಕ್‌ ಬಸ್‌ ಪೂರೈಕೆಗೆ ಅನುಮೋದನೆ ದೊರೆತಿದೆ. ಈ ಎಲೆಕ್ಟ್ರಿಕ್‌ ಬಸ್‌ಗಳು ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿಗಳಿಗೆ ಜಿಸಿಸಿ ಆಧಾರದಲ್ಲಿ ಸೇರ್ಪಡೆಯಾಗಲಿವೆ. ಆದರೆ, ಹೀಗೆ ಸೇರ್ಪಡೆಯಾಗಲಿರುವ ಬಸ್‌ಗಳ ಒಡೆತನ ಮಾತ್ರ ನಿಗಮಗಳಿಗಿರುವುದಿಲ್ಲ.

ಗುತ್ತಿಗೆ ಆಧಾರದಲ್ಲಿ ಸೇರ್ಪಡೆ

ಕೇಂದ್ರ ಸರ್ಕಾರವು ಫೇಮ್‌ ಇಂಡಿಯಾ ಅಡಿ ಬಸ್‌ಗಳ ಖರೀದಿಗೆ ಹಣ ನೀಡುವುದಿಲ್ಲ. ಬದಲಿಗೆ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ (ಜಿಸಿಸಿ ಮಾದರಿ) ಪಡೆಯಲು ಮಾತ್ರ ಆರ್ಥಿಕ ನೆರವು ನೀಡುತ್ತದೆ. ಅದರಂತೆ ಬಸ್‌ಗಳನ್ನು ಪೂರೈಸುವ ಸಂಸ್ಥೆಗಳಿಗೆ ಸಬ್ಸಿಡಿ ಮೂಲಕ ಹಣ ನೀಡಲಿದೆ. ಅದಾದ ನಂತರ ಬಸ್‌ಗಳನ್ನು ಪಡೆಯುವ ನಿಗಮಗಳು, ಬಸ್ ಪೂರೈಸುವ ಸಂಸ್ಥೆಗೆ ಕಿ.ಮೀ. ಆಧಾರದಲ್ಲಿ ಬಾಡಿಗೆ ನೀಡಲಿದೆ. ಆದರೆ, ಬಸ್‌ಗಳ ಚಾಲನೆಗೆ ಮಾತ್ರ ಬಸ್‌ ಪೂರೈಸುವ ಸಂಸ್ಥೆಯೇ ಚಾಲಕರನ್ನು ನಿಯೋಜಿಸಲಿದ್ದು, ನಿರ್ವಾಹಕರನ್ನು ಮಾತ್ರ ಸಾರಿಗೆ ನಿಗಮಗಳು ನೇಮಿಸಬೇಕಿದೆ. ಇದರಿಂದಾಗಿ ನಿಗಮಗಳಿಗೆ ಬಸ್‌ಗಳು ಸೇರ್ಪಡೆಯಾಗಲಿದ್ದರೂ, ಅದರ ಒಡೆತನ ಮಾತ್ರ ಬಸ್ ಪೂರೈಸುವ ಸಂಸ್ಥೆಗೆ ಸೇರಿದ್ದಾಗಿರಲಿದೆ.

ಬಸ್‌ ಖರೀದಿಗಾಗಿ ರಾಜ್ಯದಿಂದ ,500 ಕೋಟಿ ರು. ಅನುದಾನ?

ಕೇಂದ್ರದ ಫೇಮ್‌ ಇಂಡಿಯಾ ಯೋಜನೆ ಅಡಿ ಬಸ್‌ಗಳ ಸೇರ್ಪಡೆ ಜತೆಗೆ ರಾಜ್ಯ ಸರ್ಕಾರದಿಂದಲೂ ಬಸ್‌ ಖರೀದಿಗೆ ಅನುದಾನ ನೀಡುವ ನಿರೀಕ್ಷೆಯಿದೆ. ಅದಕ್ಕಾಗಿ 2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ 3,500 ಕೋಟಿ ರು. ಅನುದಾನಕ್ಕಾಗಿ ಕೋರಲಾಗಿದೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುತೇಕ ಅನುಮೋದನೆ ನೀಡಿದ್ದು, ರಾಜ್ಯ ಬಜೆಟ್‌ನಲ್ಲಿ ಅದರ ಕುರಿತು ಘೋಷಣೆಯಾಗುವ ಸಾಧ್ಯತೆಗಳಿವೆ. ಅದರಿಂದಾಗಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ಬಸ್‌ಗಳ ಸೇರ್ಪಡೆ ಹಾಗೂ ಅದಕ್ಕೆ ತಕ್ಕಂತೆ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ಧರಿಸಿದೆ.

ಫೇಮ್‌ ಇಂಡಿಯಾ ಬಸ್‌ ಪಡೆಯಲು ರಾಜ್ಯಗಳ ನಿರಾಸಕ್ತಿ

ಕೇಂದ್ರ ಸರ್ಕಾರ ಫೇಮ್‌ ಇಂಡಿಯಾ ಯೋಜನೆ ಅಡಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆಯಲು ನೀಡುವ ಅನುದಾನಕ್ಕಾಗಿ ಕರ್ನಾಟಕ, ತೆಲಂಗಾಣ ಹೊರತುಪಡಿಸಿ ಉಳಿದ ರಾಜ್ಯಗಳು ಅಷ್ಟಾಗಿ ಆಸಕ್ತಿ ತೋರಿಲ್ಲ. ಕೇಂದ್ರದ ಅನುದಾನ ನೇರವಾಗಿ ಬಸ್‌ಗಳನ್ನು ಪೂರೈಸುವ ಸಂಸ್ಥೆಗೆ ನೀಡಲಾಗುತ್ತದೆ. ಅದನ್ನು ಹೊರತುಪಡಿಸಿ ರಾಜ್ಯಗಳ ಸಾರಿಗೆ ಸಂಸ್ಥೆಗೆ ಯಾವುದೇ ಹಣ ನೀಡುವುದಿಲ್ಲ. ಅಲ್ಲದೆ, ಬಸ್‌ಗಳನ್ನು ಜಿಸಿಸಿ ಆಧಾರದಲ್ಲೇ ಪಡೆಯಬೇಕಿದ್ದು, ಬಸ್‌ಗಳ ಸೇವೆಗೆ ಬಾಡಿಗೆ ರೂಪದಲ್ಲಿ ಹಣ ಪಾವತಿಸುವ ಹೊಣೆ ರಾಜ್ಯಗಳ ಸಾರಿಗೆ ಸಂಸ್ಥೆಗೆ ಇರಲಿವೆ. ಹೀಗಾಗಿ ಹೆಚ್ಚಿನ ರಾಜ್ಯಗಳು ಫೇಮ್‌ ಇಂಡಿಯಾ ಬಸ್‌ಗಳತ್ತ ಆಸಕ್ತಿ ತೋರುತ್ತಿಲ್ಲ ಎಂಬುದು ಅಧಿಕಾರಿಗಳ ಮಾತಾಗಿದೆ.

ಫೇಮ್‌ ಇಂಡಿಯಾ ಯೋಜನೆ ಅಡಿ ರಾಜ್ಯಕ್ಕೆ 750 ಎಲೆಕ್ಟ್ರಿಕ್‌ ಬಸ್‌ಗಳಿಗಾಗಿ ಅನುದಾನ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂಬ ಮಾಹಿತಿಯಿದೆ. ಅಲ್ಲದೆ, ಕರ್ನಾಟಕ ಮತ್ತು ತೆಲಂಗಾಣ ಹೊರತುಪಡಿಸಿ ಬೇರೆ ರಾಜ್ಯಗಳು ಫೇಮ್‌ ಇಂಡಿಯಾ ಅಡಿ ಬಸ್‌ಗಳನ್ನು ಪಡೆಯಲು ಆಸಕ್ತಿ ತೋರಿಲ್ಲ. ನಮಗೆ ನೀಡಲಾಗುವ ಬಸ್‌ಗಳನ್ನು ಜಿಸಿಸಿ ಆಧಾರದಲ್ಲಿ ಪಡೆಯಲು ನಿರ್ಧರಿಸಲಾಗಿದೆ. ಇನ್ನು, ಬಸ್‌ಗಳ ಖರೀದಿಗಾಗಿಯೇ ರಾಜ್ಯ ಸರ್ಕಾರದಿಂದ 3,500 ಕೋಟಿ ರು. ಅನುದಾನ ಕೋರಲಾಗಿದೆ.

-ರಾಮಲಿಂಗಾರೆಡ್ಡಿ - ಸಾರಿಗೆ ಸಚಿವ