ಸಾರಾಂಶ
ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 2 ದಿನದಲ್ಲಿ ಬಳ್ಳಾರಿ ಜಿಲ್ಲೆಯ 12 ವರ್ಷದ ಬಾಲಕಿ ಸೇರಿ ಒಟ್ಟು 8 ಮಂದಿ ಹಾರ್ಟ್ ಅಟ್ಯಾಕ್‌ನಿಂದ ಮೃತಪಟ್ಟಿದ್ದಾರೆ
ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 2 ದಿನದಲ್ಲಿ ಬಳ್ಳಾರಿ ಜಿಲ್ಲೆಯ 12 ವರ್ಷದ ಬಾಲಕಿ ಸೇರಿ ಒಟ್ಟು 8 ಮಂದಿ ಹಾರ್ಟ್ ಅಟ್ಯಾಕ್‌ನಿಂದ ಮೃತಪಟ್ಟಿದ್ದಾರೆ. ಹಾಸನ ಸೇರಿದಂತೆ ರಾಜ್ಯದೆಲ್ಲೆಡೆ ನಡೆಯುತ್ತಿರುವ ಇಂಥ ಸರಣಿ ಘಟನೆಗಳಿಗೆ ಕೋವಿಡ್ ಲಸಿಕೆ ಸೇರಿದಂತೆ ಇತರೆ ಯಾವುದೇ ವಿಷಯಗಳು ಕಾರಣವಲ್ಲ ಎಂಬ ಸರ್ಕಾರದ ಸ್ಪಷ್ಟನೆಯ ಹೊರತಾಗಿಯೂ ಶಾಲೆಗೆ ತೆರಳುವ ಮಕ್ಕಳು ಮತ್ತು ಮಧ್ಯವಯಸ್ಕರೇ ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪುತ್ತಿರುವುದು ಜನರಲ್ಲಿ ಆತಂಕ ಮುಂದುವರೆಯಲು ಕಾರಣವಾಗಿದೆ.
ಬಾಲಕಿ ಸಾವು:
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕಾಳಿಂಗೇರಿ ಗ್ರಾಮದಲ್ಲಿ ಎಂದಿನಂತೆ ಶಾಲೆಗೆ ತೆರಳಲು ಸಿದ್ಧವಾಗುತ್ತಿದ್ದಾಗ ದೀಕ್ಷಾ ಕೆ. (12) ಕುಸಿದ ಬಿದ್ದು ಮೃತಪಟ್ಟಿದ್ದಾಳೆ. 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದೀಕ್ಷಾ ಸೋಮವಾರ ತಲೆ ಬಾಚಿಕೊಳ್ಳುವಾಗ ಇದ್ದಕ್ಕಿದ್ದಂತೆ ಮನೆಯಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಪಾಲಕರು ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆಗ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಸಂಡೂರಿನ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ, ಆಸ್ಪತ್ರೆಗೆ ಬರುವ ಮಾರ್ಗಮಧ್ಯದಲ್ಲಿಯೇ ಬಾಲಕಿ ಕೊನೆಯುಸಿಳೆದಿದ್ದಾಳೆ.
ಇನ್ನೊಂದೆಡೆ ಪಿಯುಸಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದ ಸಿದ್ದಾರ್ಥ ಬಸವರಾಜ ಬಡಿಗೇರಗೆ (18)ಮನೆಯಲ್ಲಿ ಮಲಗಿರುವಾಗಲೇ ಹೃದಯಾಘಾತವಾಗಿದೆ. ಸಂತೆ ಮಾಡಲು ಹೊರಗೆ ಹೋಗಿದ್ದ ತಾಯಿ ಮರಳಿ ಬಂದು ಚಹಾ ಕುಡಿಯಲು ಎಬ್ಬಿಸಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಮಂಗಳವಾರ ಇಡೀ ದಿನ ತಂದೆಯ ಬಡಿಗತನ ಕೆಲಸಕ್ಕೆ ಸಹಾಯ ಮಾಡಿದ್ದ ಸಿದ್ದಾರ್ಥ ಮಧ್ಯಾಹ್ನ ವಿಶ್ರಾಂತಿಗಾಗಿ ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದಾನೆ.
ಸ್ನಾನ ಮಾಡಿ ಬರುವಾಗ ಸಾವು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಇಬ್ಬರು ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ. ತುಳು ರಂಗಭೂಮಿ ಕಲಾವಿದ, ಬಂಟ್ವಾಳ ಬಳಿಯ ಕಾಪಿಕಾಡು ನಿವಾಸಿ ಮೌನೇಶ ಆಚಾರ್ಯ ಮಾಣಿ (44) ಮಂಗಳವಾರ ಮುಂಜಾನೆ ತಮ್ಮ ನಿವಾಸದಲ್ಲಿ ಕೊನೆಯುಸಿರೆದಿದ್ದಾರೆ. ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಹಾಸನ ಜಿಲ್ಲೆಯ ನಿವಾಸಿ ಸತೀಶ್ (46) ಅವರು ಮನೆಯಲ್ಲಿ ಬೆಳಗ್ಗೆ ಸ್ನಾನ ಮಾಡಿ ಬರುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಸಂತೆಗೆ ಬಂದಾಗ ಎದೆನೋವು:
ಹಾಸನ ಜಿಲ್ಲೆಯ ಬೇಲೂರು ಸಮೀಪದ ಬಳ್ಳೂರು ಗ್ರಾಮದ ನಿವಾಸಿ ಆನಂದ (52) ಅವರು ಸೋಮವಾರ ಮನೆಯಲ್ಲಿ ಕೆಲಸ ಮಾಡಿ ಸಂತೆಗೆ ಬಂದಾಗ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗುವ ವೇಳೆಗೆ ಪ್ರಾಣಪಕ್ಷಿ ಹಾರಿ ಹೋಗಿದೆ.
ಕಾರ್ಮಿಕ ಮರಣ:
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಬಳಿಯ ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ ಕಾರ್ಮಿಕ ಮಹಾದೇವ ಹೇರೂರ (34) ಅವರಿಗೆ ಮನೆಯಲ್ಲಿದ್ದಾಗ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ರೋಗಿಯ ಸ್ಥಿತಿ ಗಂಭೀರವಾಗಿದ್ದರಿಂದ ಕಂಪನಿಯಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ವೈದ್ಯರು ನೀಡಿದ ಸಲಹೆಯಂತೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಹಾದೇವ ಮೃತಪಟ್ಟಿದ್ದಾರೆ.
ಕೊಡಗು ಜಿಲ್ಲೆ ವಿರಾಜಪೇಟೆ ಪುರಸಭೆಯ ಬಿಜೆಪಿ ಸದಸ್ಯೆ ಆಶಾ ಸುಬ್ಬಯ್ಯ (60) ಅವರಿಗೆ ಸೋಮವಾರ ತಡರಾತ್ರಿ ಹೃದಯಾಘಾತವಾಗಿದ್ದು, ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವ ಮಾರ್ಗದ ಮಧ್ಯೆ ಮೃತಪಟ್ಟಿದ್ದಾರೆ.
ಜಿಂದಾಲ್ ಉದ್ಯೋಗಿ ಸಾವು:
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತಾರಾನಗರದ ನಿವಾಸಿ, ಜಿಂದಲ್ ಕಾರ್ಖಾನೆ ಉದ್ಯೋಗಿ ರಾಜೇಶ್ (25) ಅವರಿಗೆ ಸೋಮವಾರ ಮನೆಯಲ್ಲಿರುವಾಗ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಸಂಡೂರಿನ ಆಸ್ಪತ್ರೆಗೆ ಕರೆತಂದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ.
ಹೃದಯಾಘಾತ ಪ್ರಮಾಣ
ಏರಿಲ್ಲ: ಸಚಿವ ಪಾಟೀಲ್
ರಾಜ್ಯದಲ್ಲಿ ಹೃದಯಾಘಾತದ ಸರಾಸರಿ ಪ್ರಕರಣಗಳು ಹೆಚ್ಚಾಗಿಲ್ಲ, ಕಳೆದ ವರ್ಷದಷ್ಟೇ ಇದೆ. ಆದರೆ, ಈ ಪ್ರಕರಣಗಳ ಬಗ್ಗೆ ಪ್ರಚಾರ ಹೆಚ್ಚಾಗಿದೆ. ಅಲ್ಲದೆ, ಕೋವಿಡ್ ಲಸಿಕೆಗೂ ಹೃದಯಾಘಾತ ಪ್ರಕರಣಗಳಿಗೆ ಸಂಬಂಧವೂ ಇಲ್ಲ.
ಡಾ.ಶರಣ್ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ