ಸಾರಾಂಶ
ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶದಲ್ಲಿ ಆರೋಗ್ಯ ಸೇವೆಯ ಲಭ್ಯತೆ ಸುಧಾರಿಸಲು, ಪರಿಣಾಮಕಾರಿ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ₹873 ಕೋಟಿ ವೆಚ್ಚದಲ್ಲಿ 88 ವಿವಿಧ ಆಸ್ಪತ್ರೆಗಳ ನಿರ್ಮಾಣ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.
ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶದಲ್ಲಿ ಆರೋಗ್ಯ ಸೇವೆಯ ಲಭ್ಯತೆ ಸುಧಾರಿಸಲು, ಪರಿಣಾಮಕಾರಿ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ₹873 ಕೋಟಿ ವೆಚ್ಚದಲ್ಲಿ 88 ವಿವಿಧ ಆಸ್ಪತ್ರೆಗಳ ನಿರ್ಮಾಣ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.
ಕಲ್ಯಾಣ ಕರ್ನಾಟಕ ಸಂಪೂರ್ಣ ಅಭಿವೃದ್ಧಿ ಯೋಜನೆಯಡಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿಧಿಯಿಂದ ₹193 ಕೋಟಿ, ಕೆಕೆಆರ್‌ಡಿಬಿಯಿಂದ ₹319.63 ಕೋಟಿ, ಕೆಎಂಇಆರ್‌ಸಿಯಿಂದ ₹67.85 ಕೋಟಿ, ರಾಜ್ಯ ಸರ್ಕಾರದಿಂದ ₹292.58 ಕೋಟಿ ಬಳಕೆ ಮಾಡಿಕೊಂಡು ಐಪಿಎಚ್‌ಎಸ್ ಮಾನದಂಡಗಳ ಪ್ರಕಾರ ಆಸ್ಪತ್ರೆಗಳಲ್ಲಿನ ಹಾಸಿಗೆಗಳನ್ನು ಹಾಗೂ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಇದರಡಿ ಮೊದಲ ಹಂತದಲ್ಲಿ ₹411.88 ಕೋಟಿ ವೆಚ್ಚದಲ್ಲಿ 41 ಆಸ್ಪತ್ರೆಗಳ ನಿರ್ಮಾಣ ಕೈಗೊಳ್ಳಲಾಗುವುದು. ರಾಯಚೂರು, ಯಾದಗಿರಿ, ಕಲಬುರಗಿ, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿ ಒಟ್ಟು 41 ಆಸ್ಪತ್ರೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಕಾಮಗಾರಿಗಳಿಗೆ ಯಾವುದೇ ಹೆಚ್ಚುವರಿ ಅನುದಾನ ಕೋರದಂತೆ ನಿಗದಿಪಡಿಸಲಾದ ಅನುದಾನದ ಮಿತಿಯೊಳಗೆ ಕೈಗೊಳ್ಳಬೇಕು ಎಂಬ ಷರತ್ತಿನೊಂದಿಗೆ ಆರೋಗ್ಯ ಇಲಾಖೆ ಅನುಮೋದನೆ ನೀಡಿದೆ.