ಸಾರಾಂಶ
ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು ಹತ್ತು ವಿಧೇಯಕಗಳಿಗೆ ಬುಧವಾರ ವಿಧಾನ ಪರಿಷತ್ ಅಂಗೀಕಾರ ನೀಡಿತು.
ವಿಧಾನ ಪರಿಷತ್ತು : ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದು ಹತ್ತು ವಿಧೇಯಕಗಳಿಗೆ ಬುಧವಾರ ವಿಧಾನ ಪರಿಷತ್ ಅಂಗೀಕಾರ ನೀಡಿತು.
ಗಿಕ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ, ಬಾಲ್ಯ ನಿಶ್ಚಿತಾರ್ಥವನ್ನೂ ಅಪರಾಧವೆಂದು ಪರಿಗಣಿಸಿ, ಶಿಕ್ಷೆ ವಿಧಿಸುವ 2025ನೇ ಸಾಲಿನ ‘ಬಾಲ್ಯ ವಿವಾಹ ನಿಶೇಷ (ಕರ್ನಾಟಕ ತಿದ್ದುಪಡಿ) ವಿಧೇಯಕ’, ಸಾರಿಗೆ ನೌಕರರರವನ್ನು ಇನ್ನೂ 10 ವರ್ಷ ನಿರ್ಬಂಧಿಸುವ ‘ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ತಿದ್ದುಪಡಿ ವಿಧೇಯಕ’, ಕಡಿಮೆ ವಿಸ್ತೀರ್ಣದ ಕಟ್ಟಡಗಳಿಗೆ ಸಿಸಿ, ಒಸಿ ವಿನಾಯಿತಿ ನೀಡುವ ‘ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ’, ನಗರ ಪಾಲಿಕೆಗಳಿಗೆ ಆಯುಕ್ತಾಲಯ ಸೃಜಿಸುವುದು ಸೇರಿ ಆಡಳಿತ ಸುಧಾರಣೆಗೆ ತಂದಿರುವ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಮತ್ತು ಕೆಲವು ಇತರೆ ಕಾನೂನುಗಳ ತಿದ್ದುಪಡಿ ವಿಧೇಯಕ’.
ದೇವದಾಸಿಯರು ಸರ್ಕಾರದ ಸೌಲಭ್ಯ, ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ತಂದೆ ಹೆಸರು ತುಂಬುವುದನ್ನು ಕಡ್ಡಾಯಗೊಳಿಸದ ಅಥವಾ ಅವರಿಷ್ಟಕ್ಕೆ ಬಿಡುವ ‘ಕರ್ನಾಟಕ ದೇವದಾಸಿ (ಪ್ರತಿಬಂಧಕ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ವಿಧೇಯಕ’, ಸರ್ಕಾರಿ ಕೋಟಾದ ವೈದ್ಯ ಸೀಟಿನಲ್ಲಿ ವ್ಯಾಸಂಗ ಮಾಡಿದವರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಹಾಗು ಗ್ರಾಮೀಣ ಆಸ್ಪತ್ರೆಗಳಿಗೆ ನಿಯೋಜಿಸಿ ಹೆಚ್ಚುವರಿಯಾದ ವೈದ್ಯರನ್ನು ನಗರ ಪ್ರದೇಶಕ್ಕೂ ನಿಯೋಜಿಸುವ ‘ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ’, ನಕಲಿ ವೈದ್ಯರನ್ನು ತಡೆಯಲು ತರಲಾಗಿರುವ ‘ಕರ್ನಾಟಕ ವೈದ್ಯಕೀಯ ನೋಂದಣಿ(ತಿದ್ದುಪಡಿ) ವಿಧೇಯಕ, ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ’ ಹಾಗೂ ಬೆಂಗಳೂರು ನಗರ ವಿವಿಗೆ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರು ಹೆಸರು ಇಡುವ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ವಿಧೇಯಕಕ್ಕೆ ಅಂಗೀಕಾರ ದೊರೆಯಿತು.
ಸಂಬಂಧಪಟ್ಟ ಇಲಾಖಾ ಸಚಿವರು ಪ್ರತ್ಯೇಕವಾಗಿ ವಿಧೇಯಕ ಮಂಡಿಸಿದರು. ಸುದೀರ್ಘ ಚರ್ಚೆಯ ಬಳಿಕ ಸಭಾಪತಿ ಅವರು ಧ್ವನಿ ಮತದ ಮೂಲಕ ಅಂಗೀಕಾರ ಪಡೆದರು.