ಸಾರಾಂಶ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಲಾದ ಒಂಬತ್ತು ವಿಶ್ವವಿದ್ಯಾಲಯಗಳ ಕುರಿತಂತೆ ಅಧ್ಯಯನ ಮಾಡಲಾಗಿದ್ದು, ಅವುಗಳನ್ನು ಮುಚ್ಚುವ ಬದಲು ಹಳೇ ವಿಶ್ವವಿದ್ಯಾಲಯಗಳೊಂದಿಗೆ ವಿಲೀನಗೊಳಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು
ವಿಧಾನಸಭೆ : ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಲಾದ ಒಂಬತ್ತು ವಿಶ್ವವಿದ್ಯಾಲಯಗಳ ಕುರಿತಂತೆ ಅಧ್ಯಯನ ಮಾಡಲಾಗಿದ್ದು, ಅವುಗಳನ್ನು ಮುಚ್ಚುವ ಬದಲು ಹಳೇ ವಿಶ್ವವಿದ್ಯಾಲಯಗಳೊಂದಿಗೆ ವಿಲೀನಗೊಳಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಿಜೆಪಿ ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಅವರು, ಖಾಸಗಿ ವಿಶ್ವವಿದ್ಯಾಲಯಗಳನ್ನು ಮಾಡಬೇಕಾದರೂ ಕೆಲ ಮಾನದಂಡ ಅನುಸರಿಸಬೇಕು. ಆದರೆ, ನೂತನ ವಿಶ್ವವಿದ್ಯಾಲಯಗಳ ರಚನೆ ವೇಳೆ ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದು ತಿಳಿದಿಲ್ಲ. ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿಲ್ಲ, ಬದಲಿಗೆ ಹಳೆ ವಿವಿಗಳೊಂದಿಗೆ ವಿಲೀನಗೊಳಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗ ವಿದೇಶದಲ್ಲಿ ವ್ಯಾಸಂಗಕ್ಕೆ ತೆರಳಬೇಕಿತ್ತು. ಹೀಗಾಗಿ ಪಿಇಎಸ್ ಕಾಲೇಜಿನಲ್ಲಿ ದಾಖಲಾತಿಗೆ ಪ್ರಯತ್ನಿಸಿದರು. ಆದರೆ, ಅವರು ಉತ್ತಮ ವಿವಿಯಲ್ಲಿ ಪದವಿ ಪಡೆಯಲಿಲ್ಲ ಎಂಬ ಕಾರಣಕ್ಕಾಗಿ ಪಿಇಎಸ್ ಕಾಲೇಜಿಗೆ ಪ್ರವೇಶ ದೊರೆತಿರಲಿಲ್ಲ. ಈಗ ಬಿಜೆಪಿ ಸ್ಥಾಪಿಸಿರುವ 9 ವಿವಿಗಳಲ್ಲಿ ವ್ಯಾಸಂಗ ಮಾಡಿದರೂ ವಿದ್ಯಾರ್ಥಿಗಳಿಗೆ ಅದೇ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ವಿವಿಗಳನ್ನು ಮುಚ್ಚುವ ಬದಲು ವಿಲೀನಗೊಳಿಸುತ್ತಿದ್ದೇವೆ. ವಿದ್ಯಾರ್ಥಿಗಳು ತಾವುಗಳು ವ್ಯಾಸಂಗ ಮಾಡುತ್ತಿರುವ ಅದೇ ಕಾಲೇಜುಗಳಲ್ಲಿ ವ್ಯಾಸಂಗ ಮುಂದುವರಿಸುತ್ತಾರೆ. ವಿಶ್ವವಿದ್ಯಾಲಯ ಮಾತ್ರ ಬದಲಾಗಲಿದೆ ಎಂದು ತಿಳಿಸಿದರು.
ಅದಕ್ಕೂ ಮುನ್ನ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಆರ್ಥಿಕ ನಷ್ಟದ ನೆಪವೊಡ್ಡಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಪಾಪರ್ ಆಗಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಕುಂಠಿತವಾಗಲು ಇದು ಕಾರಣವಾಗಲಿದೆ. ಮಹಿಳೆಯರು, ಹಿಂದುಳಿದವರು, ಪರಿಶಿಷ್ಟ ಜಾತಿ/ಪಂಗಡವರು ಉನ್ನತ ಶಿಕ್ಷಣ ಪಡೆಯಲು ಆಗದಂತಾಗುತ್ತದೆ, ಹೀಗಾಗಿ ವಿಶ್ವವಿದ್ಯಾಲಯಗಳನ್ನು ಮುಚ್ಚದಂತೆ ಆಗ್ರಹಿಸಿದರು.
ಬಿಜೆಪಿಯ ಡಾ. ಅಶ್ವತ್ಥನಾರಾಯಣ್ ಮಾತನಾಡಿ, ರುಪ್ಸಾ ನಿಯಮದಂತೆ ವಿಶ್ವವಿದ್ಯಾಲಯಗಳನ್ನು ರಚನೆ ಮಾಡಿದ್ದೆವು. ಈ ವಿಶ್ವವಿದ್ಯಾಲಯಗಳನ್ನು ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭಿಸಲು ಕೇವಲ 450 ಕೋಟಿ ರು. ಬೇಕಾಗಲಿದೆ. ಇಷ್ಟು ಹಣ ಭರಿಸಲು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಉತ್ತರಿಸಿ, ಬಿಜೆಪಿ ಸರ್ಕಾರ ನೂತನ ವಿಶ್ವವಿದ್ಯಾಲಯಗಳಿಗೆ ಹೊಸ ಸಿಬ್ಬಂದಿ ನೇಮಕ ಮಾಡುವ ಬದಲು, ಬೇರೆ ವಿಶ್ವವಿದ್ಯಾಲಯಗಳಲ್ಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿತು. ಇದರಿಂದ ಎರಡೂ ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗಿ, ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಇದನ್ನು ತಪ್ಪಿಸಲು ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಮಂಡ್ಯ ವಿವಿ ಮುಚ್ಚದಂತೆ ಶಾಸಕ ಆಗ್ರಹ:
ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ, ಅವರು ಮಂಡ್ಯ ವಿಶ್ವವಿದ್ಯಾಲಯವನ್ನು ಸ್ಥಗಿತಗೊಳಿಸದಂತೆ ಆಗ್ರಹಿಸುತ್ತೇನೆ. ಈ ಬಗ್ಗೆ ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲೂ ಕೋರಿದ್ದೇನೆ ಎಂದರು.