ಕೆಎಚ್‌ಬಿಯ 828 ಸೈಟ್‌ಗಳಿಗೆ ಬರೋಬ್ಬರಿ 9,732 ಅರ್ಜಿ!

| N/A | Published : May 12 2025, 08:39 AM IST

world soil day

ಸಾರಾಂಶ

ಕರ್ನಾಟಕ ಗೃಹ ಮಂಡಳಿಯಿಂದ ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ಬ್ಯಾಲಾಳು ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿ ಹಂಚಿಕೆಗೆ ಲಭ್ಯವಿರುವ 828 ಉಳಿಕೆ ನಿವೇಶನಗಳಿಗೆ ಬರೋಬ್ಬರಿ 9,732 ಅರ್ಜಿಗಳು ಸಲ್ಲಿಕೆಯಾಗಿವೆ.

 ಬೆಂಗಳೂರು : ಕರ್ನಾಟಕ ಗೃಹ ಮಂಡಳಿಯಿಂದ ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ಬ್ಯಾಲಾಳು ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿ ಹಂಚಿಕೆಗೆ ಲಭ್ಯವಿರುವ 828 ಉಳಿಕೆ ನಿವೇಶನಗಳಿಗೆ ಬರೋಬ್ಬರಿ 9,732 ಅರ್ಜಿಗಳು ಸಲ್ಲಿಕೆಯಾಗಿವೆ.

ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿರುವುದರಿಂದ ಮೇ 28ರಂದು ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ.

20*30, 30*40 ಚದರಡಿ ಸೇರಿದಂತೆ ವಿವಿಧ ಅಳತೆಗಳ 828 ಉಳಿಕೆ ನಿವೇಶನಗಳ ಹಂಚಿಕೆಗೆ ಫೆಬ್ರವರಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ 9,732 ಅರ್ಜಿಗಳ ಪೈಕಿ 9,477 ಅರ್ಜಿಗಳು ಲಾಟರಿಗೆ ಅರ್ಹವಾಗಿವೆ.

ಹಂಚಿಕೆ ಆಗಿದ್ದರೂ ಅರ್ಜಿ ಸಲ್ಲಿಕೆ!

ಈಗಾಗಲೇ ಗೃಹ ಮಂಡಳಿಯಿಂದ ಫಲಾನುಭವಿಗಳು ಆಗಿದ್ದರೂ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ 73 ಜನರ ಅರ್ಜಿಗಳನ್ನು ಗೃಹ ಮಂಡಳಿ ಅನರ್ಹಗೊಳಿಸಿ ತಿರಸ್ಕರಿಸಿದೆ.

ಅವಧಿ ಮುಗಿದ ಆದಾಯ ಪ್ರಮಾಣ ಪತ್ರ ಸಲ್ಲಿಕೆ, ಕುಟುಂಬದ ಬೇರೆ ಸದಸ್ಯರ ಹೆಸರಿನಲ್ಲಿ ಆದಾಯ ಪ್ರಮಾಣ ಪತ್ರ ಸಲ್ಲಿಕೆ, ಆದಾಯ ಪ್ರಮಾಣಪತ್ರ ಸಲ್ಲಿಸದೆ ಇರುವುದು, ನಿಗದಿಪಡಿಸಿರುವ ಆದಾಯದ ಮಿತಿ ಹೆಚ್ಚು ಆದಾಯ ಹೊಂದಿರುವ ಕಾರಣಗಳಿಂದ 181 ಜನರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದ ಕೋಟಾದಡಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದ ಒಬ್ಬ ಸರ್ಕಾರಿ ನೌಕರನ ಅರ್ಜಿಯನ್ನು ಗೃಹ ಮಂಡಳಿ ಅನರ್ಹಗೊಳಿಸಿದೆ.