ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ವಿರುದ್ಧ ಇದೀಗ ಸ್ವತಃ ಅವರ ಪುತ್ರ ಶ್ರವಣ್ ತನ್ನ ಸಹಿ ನಕಲು ಮಾಡಿದ ಆರೋಪ ಸಂಬಂಧ ದೂರು ಸಲ್ಲಿಸಿದ್ದಾರೆ.

ಬೆಂಗಳೂರು : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ವಿರುದ್ಧ ಇದೀಗ ಸ್ವತಃ ಅವರ ಪುತ್ರ ಶ್ರವಣ್ ತನ್ನ ಸಹಿ ನಕಲು ಮಾಡಿದ ಆರೋಪ ಸಂಬಂಧ ದೂರು ಸಲ್ಲಿಸಿದ್ದಾರೆ.

ನಗರದ 19ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಈ ದೂರಿನ ವಿಚಾರಣೆಯನ್ನು ನಡೆಸಿ, ಪ್ರಕರಣ ಕುರಿತು ಲಿಖಿತ ಉತ್ತರ ನೀಡುವಂತೆ ಯೋಗೇಶ್ವರ್‌ ಅವರಿಗೆ ಸೂಚಿಸಿ, ವಿಚಾರಣೆಯನ್ನು ಡಿ.5ಕ್ಕೆ ಮುಂದೂಡಿದೆ.

ಕೆಲ ಸಮಯದ ಹಿಂದಷ್ಟೇ ಪುತ್ರಿ ನಿಶಾ ಕೂಡಾ ಯೋಗೇಶ್ವರ್‌ ವಿರುದ್ಧ ದೈಹಿಕ ಹಲ್ಲೆ ಸೇರಿದಂತೆ ಹಲವು ಗಂಭೀರ ಆರೋಪ ಮಾಡಿದ್ದರು. ಅದರ ಬೆನ್ನಲ್ಲೇ ಇದೀಗ ಪುತ್ರನೂ ಕಾನೂನು ಸಮರ ಸಾರಿದ್ದಾನೆ.

ಪ್ರಕರಣ ಹಿನ್ನೆಲೆ:

‘ಅಮ್ಮ ಮತ್ತು ನಾನು ಬೆಂಗಳೂರಿನಲ್ಲಿ ಮನೆಯೊಂದನ್ನು ಖರೀದಿ ಮಾಡಿದ್ದೆವು. ನಂತರ ಯಾವುದೇ ತಕರಾರು ಇಲ್ಲದೇ ಮನೆಯನ್ನು ಸೋದರಿ ನಿಶಾಗೆ ಗಿಫ್ಟ್ ನೀಡಿದ್ದೆವು. 2024 ಅಕ್ಟೋಬರ್‌ನಲ್ಲಿ ನಮ್ಮ ತಂದೆ ಯೋಗೇಶ್ವರ್‌ ಅವರ ಆಪ್ತ ಸಹಾಯಕರ ಮೂಲಕ ನನಗೆ ಒಂದು ಡ್ರಾಫ್ಟ್‌ ನೋಟಿಸ್‌ ಬಂದಿದೆ. ಆ ನೋಟಿಸ್‌ನಲ್ಲಿ ಗಿಫ್ಟ್‌ ನೀಡಿದ್ದ ಮನೆಯ ಭಾಗ ಕೇಳಿ ನಾನು ಮತ್ತು ನನ್ನ ತಾಯಿ, ಸಹೋದರಿ ನಿಶಾ ವಿರುದ್ಧ ಕೇಸ್ ಹಾಕುವ ಅಂಶಗಳಿವೆ. ಜೊತೆಗೆ ಮನೆಯನ್ನು ನಾನು ದಾನವಾಗಿ ನೀಡಿಲ್ಲ. ದಾನವಾಗಿ ನೀಡುವುದಕ್ಕೆ ನಾನು ಒಪ್ಪಿಯೂ ಇಲ್ಲ. ಮನೆಯಲ್ಲಿ ನನಗೆ ಪಾಲುಬೇಕು ಎಂದು ಕೇಳಿರುವುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ’ ಎಂದು ಶ್ರವಣ್‌ ಆರೋಪಿಸಿದ್ದಾರೆ.

ಸಹಿ ನಕಲು: ಆದರೆ ಇಂಥದ್ದೊಂದು ನೋಟಿಸ್‌ ನಾನು ಸಹಿಯನ್ನೇ ಹಾಕಿಲ್ಲ. ನನ್ನ ತಂದೆ ಯೋಗೇಶ್ವರ್‌ ಅವರೇ ನನ್ನ ಸಹಿ ನಕಲು ಮಾಡಿ, ನಾನು ಪಾಲು ಕೇಳಿರುವಂತೆ ಪ್ರಕರಣ ದಾಖಲಿಸಿದ್ದಾರೆ. ಅಂದರೆ ನನ್ನ ಹೆಸರಿನಲ್ಲಿ ಅಮ್ಮ ಮತ್ತು ಸಹೋದರಿ ವಿರುದ್ಧ ತಂದೆಯೇ ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿನಲ್ಲಿ ಶ್ರವಣ್‌ ಆರೋಪಿಸಿದ್ದಾರೆ.