ಸಾರಾಂಶ
ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪತಂಜಲಿ ಕಂಪನಿಯ ಎಲ್ಲಾ ಉತ್ಪನ್ನಗಳನ್ನು ಆರೋಗ್ಯ ಇಲಾಖೆಯಿಂದ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪತಂಜಲಿ ಕಂಪನಿಯ ಎಲ್ಲಾ ಉತ್ಪನ್ನಗಳನ್ನು ಆರೋಗ್ಯ ಇಲಾಖೆಯಿಂದ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತಂಜಲಿ ಉತ್ಪನ್ನಗಳಲ್ಲಿ ರೋಗ ಗುಣಪಡಿಸುವ ಅಂಶಗಳು ಮತ್ತು ಅದಕ್ಕೆ ಪುರಾವೆಗಳು ಇಲ್ಲದಿದ್ದರೂ ಇದೆ ಎಂದು ಜನರ ದಾರಿ ತಪ್ಪಿಸಲಾಗುತ್ತಿದೆ. ಕಂಪನಿಯ ಲಾಭಕ್ಕಾಗಿ ದಾರಿ ತಪ್ಪಿಸುವ ಸುಳ್ಳುಗಳನ್ನು ಹೇಳುತ್ತಿದ್ದರು. ಆಧಾರರಹಿತ ಮಾಹಿತಿಯನ್ನು ನೀಡುತ್ತಿದ್ದರು. ಹೀಗಾಗಿಯೇ, ಪತಂಜಲಿ ಮತ್ತು ಅದರ ಮುಖ್ಯಸ್ಥರನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ ಎಂದರು.
ಯಾವುದೇ ಸಂಶೋಧನೆಗಳು, ದಾಖಲೆ ಇಲ್ಲದೆ ಪತಂಜಲಿ ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತಿದೆ. ಪತಂಜಲಿ ಉತ್ಪನ್ನಗಳಲ್ಲಿ ಬೇರೆ ಏನಾದರೂ ಮಿಶ್ರಣ ಮಾಡಲಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸುತ್ತೇವೆ. ನಮ್ಮ ರಾಜ್ಯದ ಔಷಧಿ ನಿಯಂತ್ರಣ ಇಲಾಖೆ ಮತ್ತು ಆಯುಷ್ ಇಲಾಖೆಯಿಂದ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷೆ ನಡೆಸಿ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬಾಬಾ ರಾಮ್‌ದೇವ್ ಮತ್ತು ಪತಂಜಲಿ ಕಂಪನಿಯಿಂದ ಅಕ್ಷಮ್ಯ ಮೋಸವಾಗಿದೆ. ಆಯುರ್ವೇದ ಮತ್ತು ಭಾರತೀಯ ಔಷಧಿ ವ್ಯವಸ್ಥೆಗೆ ಆತ ಕಳಂಕ ತಂದಿದ್ದಾನೆ. ಎಲ್ಲವನ್ನು ಕಣ್ಣು ಮುಚ್ಚಿಕೊಂಡು ನಂಬಿದರೆ ಹೀಗೆ ಆಗುವುದು. ಪತಂಜಲಿಯ ಎಲ್ಲಾ ಉತ್ಪನ್ನಗಳನ್ನು ಪರೀಕ್ಷಿಸುವಂತೆ ನಮ್ಮ ಔಷಧ ನಿಯಂತ್ರಣ ಇಲಾಖೆ ಮತ್ತು ಆಯುಷ್ ಆಯುಕ್ತರಿಗೆ ಸೂಚಿಸಿದ್ದೇನೆ.
ದಿನೇಶ್ ಗುಂಡೂರಾವ್, ಸಚಿವ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ