ಕೆಆರ್‌ಎಸ್‌ ಅಣೆಕಟ್ಟೆ ಭರ್ತಿಯಾಗುತ್ತಿರುವ ಹಿನ್ನೆಲೆ: ಜು.27ರಂದು ಕಾವೇರಮ್ಮಗೆ ಸಿಎಂ ಬಾಗಿನ

| Published : Jul 22 2024, 10:30 AM IST

KRS Dam

ಸಾರಾಂಶ

ಕೆಆರ್‌ಎಸ್‌ ಅಣೆಕಟ್ಟೆ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಜು.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡಲಿದ್ದಾರೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.

ಶ್ರೀರಂಗಪಟ್ಟಣ :  ಕೆಆರ್‌ಎಸ್‌ ಅಣೆಕಟ್ಟೆ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಜು.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡಲಿದ್ದಾರೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.

ಭಾನುವಾರ ಕೆಆರ್‌ಎಸ್‌ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತಮ ಮಳೆಯಿಂದ ಜಲಾಶಯ ಜುಲೈ ತಿಂಗಳಲ್ಲೇ ಭರ್ತಿಯಾಗಿದೆ. ನಮ್ಮ ರೈತ ಕುಲಕ್ಕೆ ಇದೊಂದು ರೀತಿಯ ಹಬ್ಬ. ಹೀಗಾಗಿ ತುಂಬಿರುವ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಾಗುವುದು ಎಂದು ಹೇಳಿದರು.

ಜು.27ರಂದು ಬಾಗಿನ ಸಮರ್ಪಣೆ ಕಾರ್ಯಕ್ರಮ ನಿಗದಿಯಾಗಿದ್ದು, ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿ ಸಚಿವರು ಹಾಗೂ ಮಂಡ್ಯ, ಮೈಸೂರು ಭಾಗದ ಎಲ್ಲಾ ಶಾಸಕರು ಭಾಗಿಯಾಗಲಿದ್ದಾರೆ ಎಂದರು.

ಮುಂದಿನ ಶುಕ್ರವಾರದವರೆಗೂ ಅಧಿವೇಶನ ಇದೆ. ಹೀಗಾಗಿ ಅಧಿವೇಶನ ಮುಗಿದ ನಂತರ ಜು.27ಕ್ಕೆ ಬಾಗಿನ ಸಮರ್ಪಣೆ ಕಾರ್ಯಕ್ರಮ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಸದ್ಯ ಅಣೆಕಟ್ಟೆಗೆ 70 ಸಾವಿರ ಕ್ಯುಸೆಕ್ ಒಳಹರಿವಿದೆ. 50 ಸಾವಿರ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಯಿದ್ದು, ಭಾನುವಾರ ಸಂಜೆಯ ವೇಳೆಗೆ ಜಲಾಶಯದ ಮಟ್ಟ 123.10 ಅಡಿಗಳಷ್ಟಿತ್ತು.