ಬೇಲೆಕೇರಿ ಕೇಸ್‌ : ಶಾಸಕ ಸೈಲ್‌ಗೆ ಶೀಘ್ರ ಬಿಡುಗಡೆ ಭಾಗ್ಯ - ವಿಶೇಷ ಕೋರ್ಟ್‌ ತೀರ್ಪು ಹೈಕೋರ್ಟ್‌ನಿಂದ ಸಸ್ಪೆಂಡ್‌

| Published : Nov 14 2024, 10:39 AM IST

Satish Sail
ಬೇಲೆಕೇರಿ ಕೇಸ್‌ : ಶಾಸಕ ಸೈಲ್‌ಗೆ ಶೀಘ್ರ ಬಿಡುಗಡೆ ಭಾಗ್ಯ - ವಿಶೇಷ ಕೋರ್ಟ್‌ ತೀರ್ಪು ಹೈಕೋರ್ಟ್‌ನಿಂದ ಸಸ್ಪೆಂಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿ ನೀಡಿದ್ದ ಆದೇಶವನ್ನು ಹೈಕೋರ್ಟ್‌ ಅಮಾನತ್ತಿನಲ್ಲಿರಿಸಿದೆ.

ಬೆಂಗಳೂರು : ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿ ನೀಡಿದ್ದ ಆದೇಶವನ್ನು ಹೈಕೋರ್ಟ್‌ ಅಮಾನತ್ತಿನಲ್ಲಿರಿಸಿದೆ. ಇದರಿಂದ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌, ಕೆ.ಮಹೇಶ್‌ ಕುಮಾರ್‌ ಅಲಿಯಾಸ್‌ ಕಾರದಪುಡಿ ಮಹೇಶ್‌ ಹಾಗೂ ಉದ್ಯಮಿಗಳಾದ ಸ್ವಸ್ತಿಕ್‌ ನಾಗರಾಜ್‌, ಕೆ.ವಿ.ಎನ್‌.ಗೋವಿಂದರಾಜ್‌ ಸೇರಿದಂತೆ ಹಲವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.

ಇದೇ ವೇಳೆ, ಎಲ್ಲ ಆರೋಪಿಗಳು ವಿಶೇಷ ನ್ಯಾಯಾಲಯ ವಿಧಿಸಿರುವ ದಂಡದ ಪೈಕಿ ಶೇ.25ರಷ್ಟು ಮೊತ್ತವನ್ನು ಮುಂದಿನ ಆರು ವಾರದಲ್ಲಿ ವಿಶೇಷ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂದು ಷರತ್ತು ವಿಧಿಸಿದೆ. ಠೇವಣಿ ಇಟ್ಟ ಬಳಿಕ ಎಲ್ಲ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯದ ತೀರ್ಪು ರದ್ದುಪಡಿಸಬೇಕೆಂದು ಕೋರಿ ಮಲ್ಲಿಕಾರ್ಜುನ ಶಿಪ್ಪಿಂಗ್‌ ಕಂಪನಿಯ ನಿರ್ದೇಶಕ ಆಗಿರುವ ಕಾರವಾರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌, ಸ್ವಸ್ತಿಕ್‌ ಸ್ಟೀಲ್‌ (ಹೊಸಪೇಟೆ) ಕಂಪನಿ ನಿರ್ದೇಶಕ ಕೆ.ವಿ.ನಾಗರಾಜು ಅಲಿಯಾಸ್‌ ಸ್ವಸ್ತಿಕ್‌ ನಾಗರಾಜ್‌, ಉದ್ಯಮಿ ಕೆ.ವಿ.ಎನ್‌.ಗೋವಿಂದರಾಜ್‌, ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌ ಪಾಲುದಾರ ಕೆ.ಮಹೇಶ್‌ ಕುಮಾರ್‌ ಅಲಿಯಾಸ್‌ ಕಾರದಪುಡಿ ಮಹೇಶ್‌, ಆಶಾಪುರ ಮೈನ್‌ ಕಮ್‌ ಲಿಮಿಟೆಡ್‌ ಕಂಪನಿ ನಿರ್ದೇಶಕ ಚೇತನ್‌ ಶಾ, ಲಾಲ್‌ ಮಹಲ್‌ ಲಿಮಿಟೆಡ್‌ ಮಾಲೀಕ ಪ್ರೇಮ್‌ ಚಂದ್‌ ಗರ್ಗ್‌ ಮತ್ತಿತರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಜೊತೆಗೆ, ಮೇಲ್ಮನವಿ ಇತ್ಯರ್ಥವಾಗುವವರೆಗೆ ವಿಶೇಷ ನ್ಯಾಯಾಲಯ ತಮಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತುಪಡಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದರು.

ಅರ್ಜಿ ವಿಚಾರಣೆಯ ವೇಳೆ ಯಾವ ದೋಷಿಗೆ, ಯಾವ ಶಿಕ್ಷೆಗೆ ಎಷ್ಟು ದಂಡ ವಿಧಿಸಲಾಗಿದೆ ಎಂಬುದನ್ನು ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸದ ವಿಶೇಷ ನ್ಯಾಯಾಲಯದ ಬಗ್ಗೆ ಹೈಕೋರ್ಟ್‌ ಮೌಖಿಕವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ಕಳವು ಮತ್ತು ರಫ್ತು ಮಾಡಿರುವ ಸಂಬಂಧ ಒಟ್ಟು ಆರು ಪ್ರಕರಣಗಳಲ್ಲಿ ಸತೀಶ್‌ ಸೈಲ್‌ಗೆ 50 ಕೋಟಿ ರು.ಗಿಂತ ಅಧಿಕ ದಂಡ ಮತ್ತು ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಿ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ಅ.26ರಂದು ಆದೇಶಿಸಿತ್ತು.

ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌ ಪಾಲುದಾರ ಕೆ.ಮಹೇಶ್‌ ಕುಮಾರ್‌ ಅಲಿಯಾಸ್‌ ಕಾರದಪುಡಿ ಮಹೇಶ್‌, ಲಾಲ್‌ ಮಹಲ್‌ ಲಿಮಿಟೆಡ್‌ ಮಾಲೀಕ ಪ್ರೇಮ್‌ ಚಂದ್‌ ಗರ್ಗ್‌, ಆಶಾಪುರ ಮೈನ್‌ ಕಮ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಚೇತನ್‌ ಶಾ, ಸ್ವಸ್ತಿಕ್‌ ಸ್ಟೀಲ್‌ (ಹೊಸಪೇಟೆ) ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕ ಕೆ.ವಿ.ನಾಗರಾಜ, ಕೆ.ವಿ.ಎನ್‌. ಗೋವಿಂದರಾಜ್‌ ಅವರಿಗೂ ಶಿಕ್ಷೆ ಹಾಗೂ ಕೋಟ್ಯಂತರ ಹಣವನ್ನು ದಂಡವಾಗಿ ವಿಧಿಸಿತ್ತು. ಇದರಿಂದ ಎಲ್ಲ ಆರೋಪಿಗಳೂ ಹೈಕೋರ್ಟ್‌ ಮೊರೆ ಹೋಗಿದ್ದರು.