ಬೆಂಗಳೂರು : ಮೈಕ್ರೋ ಫೈನಾನ್ಸ್ ಕಿರುಕುಳ ತಡೆ ಸುಗ್ರೀವಾಜ್ಞೆ ಸಿದ್ಧತೆಗೆ ಮಹತ್ವದ ಸಭೆ

| N/A | Published : Feb 02 2025, 11:17 AM IST

money

ಸಾರಾಂಶ

ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ರೂಪಿಸುವ ಕುರಿತು ಸಭೆ ನಡೆಸಿದ್ದು, ಸಾಲಕ್ಕಾಗಿ ಅರ್ಜಿ ಸಲ್ಲಿಕೆಯಿಂದ ಹಿಡಿದು ಇಡೀ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕವೇ ನಿಭಾಯಿಸಬೇಕು ಎಂಬುದು ಸೇರಿ ಹಲವು ನಿಯಮಗಳನ್ನು ಒಳಗೊಂಡ ಸುಗ್ರೀವಾಜ್ಞೆ ಅಂತಿಮ 

 ಬೆಂಗಳೂರು : ಮೈಕ್ರೋ ಫೈನಾನ್ಸ್‌ ಸಂಸ್ಥೆಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ರೂಪಿಸುವ ಕುರಿತು ಸಭೆ ನಡೆಸಿದ್ದು, ಸಾಲಕ್ಕಾಗಿ ಅರ್ಜಿ ಸಲ್ಲಿಕೆಯಿಂದ ಹಿಡಿದು ಇಡೀ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕವೇ ನಿಭಾಯಿಸಬೇಕು ಎಂಬುದು ಸೇರಿ ಹಲವು ನಿಯಮಗಳನ್ನು ಒಳಗೊಂಡ ಸುಗ್ರೀವಾಜ್ಞೆ ಅಂತಿಮಗೊಂಡಿದೆ ಎಂದು ತಿಳಿದು ಬಂದಿದೆ.

ಇನ್ನು, ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲದ ವ್ಯವಹಾರ ಹಾಗೂ ಸಮಸ್ಯೆಗಳ ಕುರಿತು ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳನ್ನು ಒಳಗೊಂಡ ಒಂಬುಡ್ಸ್‌ಮನ್‌ ನೇಮಕ ಮಾಡಲು ನಿರ್ಧರಿಸಲಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಸಾಲಗಾರರ ಕುರಿತು ಇವರು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸೌಧದಲ್ಲಿ ಶನಿವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌ ಅವರು ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಸಾಲ ನೀಡುವ ಮೂಲಕ ಬಡವರನ್ನು ಸಾಲದ ಸುಳಿಗೆ ಸಿಲುಕಿಸುತ್ತಿರುವುದನ್ನು ತಡೆಯಲು ಆನ್ಲೈನ್ ಪೋರ್ಟಲ್ ಮಾಡಿ ಯಾರಿಗೆ ಎಷ್ಟು ಸಾಲ ನೀಡಲಾಗಿದೆ ಎಂಬುದನ್ನು ಅಪ್ಡೇಟ್ ಮಾಡಬೇಕು. ಇಡೀ ಪ್ರಕ್ರಿಯೆ ಆನ್‌ಲೈನ್‌ ಮೂಲಕವೇ ನಡೆಸಬೇಕು ಎಂಬ ಷರತ್ತು ವಿಧಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಡಮಾನ ಇಟ್ಟುಕೊಳ್ಳುವಂತಿಲ್ಲ:

ಇನ್ನು, ಸಾಲಕ್ಕೆ ವಿಧಿಸುವ ಬಡ್ಡಿ ದರದ ಪ್ರಮಾಣ ಪಾರದರ್ಶಕ ಹಾಗೂ ಆರ್‌ಬಿಐ ನೀತಿಗೆ ಅನುಗುಣವಾಗಿರಬೇಕು. ಮೈಕ್ರೋ ಫೈನಾನ್ಸ್ ಕಂಪನಿಗಳು ಕಡ್ಡಾಯವಾಗಿ ರಾಜ್ಯದಲ್ಲಿ ನೋಂದಣಿಯಾಗಿರಬೇಕು. ಯಾವುದೇ ಸಂದರ್ಭದಲ್ಲಿ ಈ ನೋಂದಣಿಯನ್ನು ಸರ್ಕಾರ ತಿರಸ್ಕರಿಸಬಹುದು. ಈ ಕಂಪನಿಗಳು ಸಾಲದ ಹೆಸರಿನಲ್ಲಿ ಜನರಿಂದ ಯಾವ ವಸ್ತುಗಳು-ಆಸ್ತಿಗಳನ್ನು ಅಡಮಾನ ಇಟ್ಟುಕೊಳ್ಳುವಂತಿಲ್ಲ. ಸಾಲ ಮರುಪಾವತಿ ಮಾಡದವರ ವಿರುದ್ಧ ಮಧ್ಯವರ್ತಿಗಳ ಮೂಲಕ ದಬ್ಬಾಳಿಕೆ ಮಾಡುವಂತಿಲ್ಲ ಎಂಬುದೂ ಸೇರಿ ಹಲವು ಪ್ರಮುಖ ವಿಚಾರಗಳನ್ನು ಕಾನೂನು ಚೌಕಟ್ಟಿನೊಳಗೆ ತರುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕೇಂದ್ರ ಸಚಿವರು ಹೇಳಿಕೆ ನೀಡಲು ಇರುವುದೇ?:

ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ನಾನ್‌ ಬ್ಯಾಂಕಿಂಗ್‌ ಫೈನಾನ್ಸ್‌ ಕಂಪೆನಿಗಳು ಆರ್‌ಬಿಐ ಅಡಿ ಬರುತ್ತದೆ. ಹೀಗಿದ್ದರೂ ಯಾವ ಕೇಂದ್ರ ಸಚಿವರೂ ಸಮಸ್ಯೆಗೆ ಇತ್ಯರ್ಥಗೊಳಿಸಲು ಮುಂದಕ್ಕೆ ಬರುತ್ತಿಲ್ಲ. ಕೇವಲ ಹೇಳಿಕೆಗಳನ್ನು ಕೊಡಲು ಕೇಂದ್ರ ಸಚಿವರಾಗಿದ್ದಾರಾ? ಇವರಿಗೆ ಜನರ ನೋವಿನ ಜತೆ ಸಂಬಂಧವಿಲ್ಲವೇ ಎಂದು ಕಿಡಿಕಾರಿದರು.

ಕಾನೂನು ತರಲು ನಮಗೆ ಅಧಿಕಾರವಿಲ್ಲ. ಆದರೂ ಜನರ ಹಿತ ಕಾಪಾಡುವ ಸಲುವಾಗಿ ಶರ ವೇಗದಲ್ಲಿ ನಾವು ಕಾನೂನು ಮಾಡುತ್ತಿದ್ದೇವೆ. ಜ.25 ರಂದು ಮುಖ್ಯಮಂತ್ರಿಗಳು ಸಭೆ ನಡೆಸಿ ಸೂಚನೆ ನೀಡಿದರು.

ಬಳಿಕ ವಿಧೇಯಕದ ಬಗ್ಗೆ ನಾಲ್ಕು ಬಾರಿ ಸಭೆ ನಡೆಸಿದ್ದಾರೆ. ಇಂತಹ ಪ್ರಮುಖ ವಿಷಯದ ಬಗ್ಗೆ ವಾರದ ಒಳಗಾಗಿ ಸುಗ್ರೀವಾಜ್ಞೆ ಸಿದ್ಧಪಡಿಸಿದ್ದೇವೆ. ಕೇಂದ್ರ ಸರ್ಕಾರ ಕಣ್ಮುಚ್ಚಿಕೊಂಡು ನಿದ್ದೆ ಮಾಡುತ್ತಿರುವಾಗ ನಾವು ಶರವೇಗದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.