ಸಾರಾಂಶ
ಬೆಂಗಳೂರಿನಲ್ಲಿ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗದಂತೆ ಎಲ್ಲಾ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಮತ್ತು ಕೆರೆಗಳಿಗೆ ಕೋಡಿ ಗೇಟ್ ಅಳವಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗದಂತೆ ಎಲ್ಲಾ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು. ಕೆರೆಗಳಿಗೆ ಕೋಡಿ ಗೇಟ್ ಅಳವಡಿಸುವ ಮೂಲಕ ನೀರಿನ ಪ್ರಮಾಣ ನಿಯಂತ್ರಿಸಿ ಪ್ರವಾಹ ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಳೆಯಿಂದ ಬೆಂಗಳೂರಿನಲ್ಲಿ ಯಾವುದೇ ಹಾನಿ ಉಂಟಾಗದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು. ಪ್ರತಿದಿನ ನಗರದ ಪರಿಸ್ಥಿತಿ ಕುರಿತು ಸಭೆ ನಡೆಸಿ ಪರಿಶೀಲಿಸಬೇಕು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಹಾಗೂ ಎಂಜಿನಿಯರುಗಳಿಗೆ ಜವಾಬ್ದಾರಿ ನಿಗದಿ ಪಡಿಸಿ. ಕರ್ತವ್ಯಲೋಪ ಎಸಗಿದರೆ, ಮುಲಾಜಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು.
ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಸಂಸ್ಥೆಗಳಾದ ಬಿಡಿಎ, ಜಲಮಂಡಳಿ, ಬಿಎಂಆರ್‌ಸಿಎಲ್, ಬಿಬಿಎಂಪಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಯಾವುದೇ ಹಾನಿ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ತಾಕೀತು ಮಾಡಿದರು.
ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರು ನಗರದಲ್ಲಿ ಕಂಟ್ರೋಲ್ ರೂಂ ವ್ಯವಸ್ಥೆ ಮಾಡಲಾಗಿದೆ. ದೊಡ್ಡ ಚರಂಡಿಗಳು ಓಪನ್ ಇರುವ ಸ್ಥಳಗಳನ್ನು ಗುರುತಿಸಿ ಮೊದಲೇ ಬಂದೋಬಸ್ತ್ ಮಾಡಲಾಗಿದೆ. ಇದರಿಂದ ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಮಾಹಿತಿ ನೀಡಿದರು.
ಸಚಿವರಾದ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರಿದ್ದರು.