ಸಾರಾಂಶ
ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ಒಎನ್ಡಿಸಿ (ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಮೂಲಕ ಐದು ಆ್ಯಪ್‌ಗಳಲ್ಲಿ ನಮ್ಮ ಮೆಟ್ರೋದ ಟಿಕೆಟ್ ಸೌಕರ್ಯ ಕಲ್ಪಿಸಲಿದೆ.
ಬೆಂಗಳೂರು : ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ಒಎನ್ಡಿಸಿ (ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಮೂಲಕ ಐದು ಆ್ಯಪ್‌ಗಳಲ್ಲಿ ನಮ್ಮ ಮೆಟ್ರೋದ ಟಿಕೆಟ್ ಸೌಕರ್ಯ ಕಲ್ಪಿಸಲಿದೆ.
ಮೆಟ್ರೋ ಪ್ರಯಾಣಿಕರು ಸುಲಭವಾಗಿ ಟಿಕೆಟ್ ಖರೀದಿಸಲು ಮೆಟ್ರೋ ಟಿಕೆಟ್ ಅನ್ನು ಮೈಲ್ಸ್ ಆ್ಯಂಡ್ ಕಿಲೋಮೀಟರ್ ಟುಮ್ಯಾಕೋ, ರೆಡ್ ಬಸ್, ಔಟ್ ಪಾಥ್, ಹೈವೇ ಡಿಲೈಟ್ ಸೇರಿ ಒಟ್ಟು ಐದು ಆ್ಯಪ್ಗಳ ಮೂಲಕ ಖರೀದಿಸಬಹುದಾಗಿದೆ. ಈ ಆ್ಯಪ್ಗಳು ಮೆಟ್ರೋ ಟಿಕೆಟ್ ಬುಕ್ ಮಾಡಿದರೆ, ಶೇ 20-30 ರಷ್ಟು ರಿಯಾಯಿತಿ ಕೂಡ ನೀಡುತ್ತಿವೆ.
ಪ್ರಸ್ತುತ ನಮ್ಮ ಮೆಟ್ರೋ, ವಾಟ್ಸ್ಆ್ಯಪ್ ಚಾಟ್ ಬಾಟ್ ಹಾಗೂ ಪೇಟಿಎಂನಲ್ಲಿ ಮಾತ್ರ ಮೆಟ್ರೋ ಟಿಕೆಟ್ ಖರೀದಿಗೆ ಅವಕಾಶವಿತ್ತು. ರ್ಯಾಪಿಡೋ ಹಾಗೂ ನಮ್ಮ ಯಾತ್ರಿ ಆ್ಯಪ್‌ಗಳಲ್ಲಿ ಮೆಟ್ರೋ ಟಿಕೆಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಟಿಕೆಟ್ಗಾಗಿ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಲ್ಲಿ ಸರದಿ ನಿಲ್ಲುವುದನ್ನು ತಪ್ಪಿಸಲು ಬಿಎಂಆರ್‌ಸಿಎಲ್ ಈ ಕ್ರಮ ಕೈಗೊಂಡಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.
ಇತ್ತೀಚೆಗೆ ನಿಗಮವು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಸ್ವಯಂ ಸೇವಾ ಟಿಕೆಟ್ ನೀಡುವ ಯಂತ್ರಗಳನ್ನು ಅಳವಡಿಸಿತ್ತು. ಇವು 30 ಸೆಕೆಂಡುಗಳಲ್ಲಿ ಟಿಕೆಟ್ಗಳನ್ನು ಒದಗಿಸುತ್ತವೆ. ಈ ಮೂಲಕ ಪ್ರಯಾಣಿಕರ ದಟ್ಟಣೆ ವೇಳೆಯಲ್ಲಿ ಟಿಕೆಟ್‌ಗೆ ಉಂಟಾಗುವ ನೂಕುನುಗ್ಗಲು ತಡೆಗೆ ಬಿಎಂಆರ್‌ಸಿಎಲ್ ಕ್ರಮ ವಹಿಸಿದೆ.
ಜುಲೈ ಮಧ್ಯಂತರದಲ್ಲಿ ಹಳದಿ ಮಾರ್ಗ ಸಿಎಂಆರ್‌ಎಸ್ ತಪಾಸಣೆ?
ಮೆಟ್ರೋ ಸುರಕ್ಷತಾ ಆಯುಕ್ತರ ತಂಡ (ದಕ್ಷಿಣ) ಜುಲೈ ಮಧ್ಯಂತರದಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗದ ಪರಿಶೀಲನೆ ನಡೆಸುವುದಾಗಿ ಮೂಲಗಳು ತಿಳಿಸಿವೆ.
ಆರ್.ವಿ.ರಸ್ತೆ - ಬೊಮ್ಮಸಂದ್ರ (18.8ಕಿಮೀ) ಸಂಪರ್ಕಿಸುವ ಮಾರ್ಗಕ್ಕೆ ಬಿಎಂಆರ್‌ಸಿಎಲ್ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ (ಐಎಸ್‌ಎ) ಪ್ರಮಾಣಪತ್ರವನ್ನು ಪಡೆದಿದೆ. ಇದಾದ ಬಳಿಕ ಅಂತಿಮವಾಗಿ ಬಹುತೇಕ ಜುಲೈ 15-16ರಂದು ಪರಿಶೀಲನೆ ನಡೆಯಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಹಳದಿ ಮಾರ್ಗದ ಕಾಮಗಾರಿ ಈಗಾಗಲೇ ಪೂರ್ಣವಾಗಿದ್ದು, ರೈಲು ಸಂಚಾರದ ಪ್ರಾಯೋಗಿಕ ಪರೀಕ್ಷೆಯೂ ಮುಕ್ತಾಯವಾಗಿದೆ. ಆರಂಭಿಕ ಸಂಚಾರಕ್ಕೆ ಅಗತ್ಯವಿರುವ ಒಟ್ಟಾರೆ ಮೂರು ರೈಲುಗಳ ಕೂಡ ಆಗಮಿಸಿವೆ. ಕಳೆದ ಸೆಪ್ಟೆಂಬರ್‌ನಲ್ಲೇ ಸಂಶೋಧನಾ ಗುಣಮಟ್ಟ ಮತ್ತು ವಿನ್ಯಾಸ ಸಂಸ್ಥೆ ( ಆರ್‌ಡಿಎಸ್‌ಒ) ಪ್ರಾಯೋಗಿಕ ಸಂಚಾರ ಮೂಲಕ ತಪಾಸಣೆ ನಡೆಸಿತ್ತು. ರೋಲಿಂಗ್ ಸ್ಟಾಕ್, ನಿಲ್ದಾಣಗಳ ತಪಾಸಣೆ ಆಗಿತ್ತು. ಆದರೆ ಸಿಗ್ನಲಿಂಗ್ ಸಂಬಂಧಿಸಿದ ಕೆಲ ತಪಾಸಣೆ ವಿಳಂಬವಾಗಿತ್ತು.