ಬೆಂಗಳೂರು : ಸಿಗ್ನಲಿಂಗ್‌ ತಪಾಸಣೆ ಹಿನ್ನೆಲೆ ಹಸಿರು ಮಾರ್ಗದಲ್ಲಿ 5 ದಿನ ಮೆಟ್ರೋ ಇಲ್ಲ

| Published : Aug 20 2024, 09:45 AM IST

Namma Metro

ಸಾರಾಂಶ

ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ-ಮಾದಾವರ ವಿಸ್ತರಣೆಗಾಗಿ ರೈಲಿನ ಸಿಗ್ನಲಿಂಗ್‌ ತಪಾಸಣೆ ನಿಮಿತ್ತ ಮಂಗಳವಾರ (ಆ.20) ಸೇರಿದಂತೆ ವಿವಿಧ 5 ದಿನ ಪೀಣ್ಯ ಇಂಡಸ್ಟ್ರಿ-ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಸಂಚಾರ ಸೇವೆ ಇರುವುದಿಲ್ಲ.

ಬೆಂಗಳೂರು  :  ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ-ಮಾದಾವರ ವಿಸ್ತರಣೆಗಾಗಿ ರೈಲಿನ ಸಿಗ್ನಲಿಂಗ್‌ ತಪಾಸಣೆ ನಿಮಿತ್ತ ಮಂಗಳವಾರ (ಆ.20) ಸೇರಿದಂತೆ ವಿವಿಧ 5 ದಿನ ಪೀಣ್ಯ ಇಂಡಸ್ಟ್ರಿ-ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ಸಂಚಾರ ಸೇವೆ ಇರುವುದಿಲ್ಲ.

ಆಗಸ್ಟ್ 20, 23, 30 ರಂದು ಹಾಗೂ ಸೆಪ್ಟೆಂಬರ್ 6 ಮತ್ತು 11 ರಂದು ಇಡೀ ದಿನ ರೈಲು ಸೇವೆ ಇರುವುದಿಲ್ಲ. ಜಾಲಹಳ್ಳಿ, ದಾಸರಹಳ್ಳಿ, ನಾಗಸಂದ್ರ ನಿಲ್ದಾಣಗಳಿಗೆ ರೈಲು ಸಂಚರಿಸುವುದಿಲ್ಲ. ಆಗಸ್ಟ್ 24ರಂದು ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ಕಡೆಗೆ ಕೊನೆಯ ರೈಲು ಸೇವೆ ರಾತ್ರಿ 11.5ರ ಬದಲಾಗಿ 10 ಗಂಟೆಗೆ ತೆರಳಲಿದೆ. ಆಗಸ್ಟ್ 25 ರಂದು ಮೊದಲ ರೈಲು ಸೇವೆ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಲಿದೆ. ಆಗಸ್ಟ್ 24 ರಂದು ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆವರೆಗೆ ಕೊನೆಯ ರೈಲು ಸೇವೆ 11:12ಕ್ಕೆ ಆರಂಭವಾಗಲಿದೆ. ಆಗಸ್ಟ್ 25ರಂದು ಮೊದಲ ರೈಲು ಸೇವೆ ಬೆಳಗ್ಗೆ 5 ಕ್ಕೆ ಪ್ರಾರಂಭವಾಗಲಿದೆ. ಉಳಿದಂತೆ ನೇರಳೆ ಮಾರ್ಗದ ಮೆಟ್ರೋ ಸೇವೆ ಹಾಗೂ ಹಸಿರು ಮಾರ್ಗದಲ್ಲಿ ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಮಂಡಳಿವರೆಗೂ ರೈಲುಗಳ ಸಂಚಾರ ಎಂದಿನಂತೆ ಇರುತ್ತದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

 ಹಳಿಗೆ ಬಿದ್ದ ಇಬ್ಬರು ಅಂಧರು 

ಸೋಮವಾರ ಮಧ್ಯಾಹ್ನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ವೇಳೆ ಇಬ್ಬರು ಅಂಧರು ಆಯತಪ್ಪಿ ಹಳಿಗೆ ಬಿದ್ದ ಘಟನೆ ನಡೆದಿದ್ದು, ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಮೆಟ್ರೋ ಹಸಿರು ಮಾರ್ಗದಲ್ಲಿ ಮಧ್ಯಾಹ್ನ 1.13ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಿಂದ ಸುಮಾರು 15 ನಿಮಿಷಗಳ ಕಾಲ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು. ಮೂವರು ಅಂಧರು ಜಯನಗರದಿಂದ ಅತ್ತಿಗುಪ್ಪೆಗೆ ಹೋಗುತ್ತಿದ್ದರು. 

ಇಂಟರ್‌ಚೆಂಜ್‌ ಮೆಜೆಸ್ಟಿಕ್‌ನಲ್ಲಿ ನೇರಳೆ ಮಾರ್ಗಕ್ಕೆ ಬದಲಾಯಿಸಲು ಇವರು ಇಳಿದುಕೊಂಡಿದ್ದರು. ಕೆಲ ಹೊತ್ತು ಸ್ಟೇಷನ್‌ನಲ್ಲಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ನಡೆದು ಹೋಗುವಾಗ ಆಯತಪ್ಪಿ ಹಳಿಗೆ ಬಿದ್ದಿದ್ದಾರೆ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಎಮರ್ಜೆನ್ಸಿ ಬಟನ್ ಬಳಸಿ ವಿದ್ಯುತ್ ಸರಬರಾಜು ನಿಲ್ಲಿಸಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಹಳಿಗೆ ಬಿದ್ದರೂ ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.