ಸಾರಾಂಶ
ಎಲೆಕ್ಟ್ರಾನಿಕ್ ಸಿಟಿಯ ಹೆಲಿಪ್ಯಾಡ್ ಜಾಗದಲ್ಲಿ ಚಿರತೆ ಹೆಚ್ಚಾಗಿ ಓಡಾಡಿತ್ತು. ಅಲ್ಲಿ ನಿರ್ಜನ ಪ್ರದೇಶ ಹೆಚ್ಚಾಗಿರುವುದರಿಂದ ಅಲ್ಲಿಯೇ ಚಿರತೆ ಬೀಡುಬಿಟ್ಟಿತ್ತು. ಹೆಲಿಪ್ಯಾಡ್ ಜಾಗದಲ್ಲಿ ಇಟ್ಟಿದ್ದ ಬೋನಿಗೆ ಇದೀಗ ಚಿರತೆ ಬಿದ್ದಿದೆ.
ಬೆಂಗಳೂರು : ಕಳೆದೆರೆಡು ವಾರಗಳಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆಟವಾಡಿಸುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಹೌದು, ಕಳೆದ ವಾರ ಎಲೆಕ್ಟ್ರಾನಿಕ್ಸ್ ಸಿಟಿ ಪೈ ಓವರ್‌ನ ಟೋಲ್ ಕ್ರಾಸ್ ಮಾಡಿದ್ದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಎಲೆಕ್ಟ್ರಾನಿಕ್ ಸಿಟಿ ಮೊದಲನೇ ಹಂತದಲ್ಲಿ ಚಿರತೆ ಓಡಾಡುತ್ತಿತ್ತು. ಇದರಿಂದ ಐಟಿಬಿಟಿ ಸಿಟಿ ಖ್ಯಾತಿಯ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆತಂಕ ಮನೆ ಮಾಡಿತ್ತು. ಸಾವಿರಾರು ಐಟಿ ಕಂಪನಿಗಳಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಲಕ್ಷಾಂತರ ಮಂದಿ ಐಟಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇಂತಹ ಕಡೆ ಚಿರತೆ ಓಡಾಡಿದ್ದರಿಂದ ಎಲ್ಲರನ್ನೂ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು.
ಶಾಲೆ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ
ಚಿರತೆ ಓಡಾಟದ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿದ್ದರು. ಕ್ಯಾಮರಾಗಳನ್ನ ಅಳವಡಿಸಿ ಚಿರತೆ ಓಡಾಟದ ಬಗ್ಗೆ ಟ್ರ್ಯಾಪ್ ಮಾಡಲಾಗಿತ್ತು. ಹಲವು ಕಡೆಗಳಲ್ಲಿ ಕ್ಯಾಮರಾ ಕಣ್ಣಿಗೆ ಚಿರತೆ ಬಿದ್ದಿತ್ತು.
ಮೂರು ಬೋನ್‌ಗಳನ್ನ ಇಟ್ಟು ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆಗಿಳಿದಿತ್ತು. ಎಲೆಕ್ಟ್ರಾನಿಕ್ ಸಿಟಿಯ ಹೆಲಿಪ್ಯಾಡ್ ಜಾಗದಲ್ಲಿ ಚಿರತೆ ಹೆಚ್ಚಾಗಿ ಓಡಾಡಿತ್ತು. ಅಲ್ಲಿ ನಿರ್ಜನ ಪ್ರದೇಶ ಹೆಚ್ಚಾಗಿರುವುದರಿಂದ ಅಲ್ಲಿಯೇ ಚಿರತೆ ಬೀಡುಬಿಟ್ಟಿತ್ತು. ಹೆಲಿಪ್ಯಾಡ್ ಜಾಗದಲ್ಲಿ ಇಟ್ಟಿದ್ದ ಬೋನಿಗೆ ಇದೀಗ ಚಿರತೆ ಬಿದ್ದಿದೆ.
ರಾತ್ರಿ ಬೋನಿಗೆ ಬಿದ್ದಿರುವ ಚಿರತೆಯನ್ನ ಇನ್ನೂ ಕೆಲ ಹೊತ್ತಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಶಿಫ್ಟ್ ಮಾಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.