ಬೀದರ್‌ ಎಟಿಎಂ ದರೋಡೆ, ಹತ್ಯೆ ಆರೋಪಿಗಳ ಸುಳಿವು ನೀಡಿದ್ರೆ 5 ಲಕ್ಷ - ರಾಜ್ಯ ಪೊಲೀಸ್ ಇಲಾಖೆ

| N/A | Published : Feb 16 2025, 09:42 AM IST

ATM machine

ಸಾರಾಂಶ

ಹಾಡುಹಗಲೇ ಎಟಿಎಂಗೆ ಹಣ ತುಂಬಿಸುವ ವಾಹನದಿಂದ ಹಣ ದರೋಡೆ ಹಾಗೂ ಕೊಲೆ ಪ್ರಕರಣ ಎಸಗಿದ ಖದೀಮರ ಸುಳಿವು ಕೊಟ್ಟವರಿಗೆ ರಾಜ್ಯ ಪೊಲೀಸ್ ಇಲಾಖೆ ₹5 ಲಕ್ಷ ಬಹುಮಾನ ಘೋಷಿಸಿದೆ.

  ಬೀದರ್ : ಹಾಡುಹಗಲೇ ಎಟಿಎಂಗೆ ಹಣ ತುಂಬಿಸುವ ವಾಹನದಿಂದ ಹಣ ದರೋಡೆ ಹಾಗೂ ಕೊಲೆ ಪ್ರಕರಣ ಎಸಗಿದ ಖದೀಮರ ಸುಳಿವು ಕೊಟ್ಟವರಿಗೆ ರಾಜ್ಯ ಪೊಲೀಸ್ ಇಲಾಖೆ ₹5 ಲಕ್ಷ ಬಹುಮಾನ ಘೋಷಿಸಿದೆ.

ಜ.16ರಂದು ಕೃತ್ಯ ಎಸಗಿದ ಹಂತಕರು ಬಿಹಾರ ಮೂಲದವರು ಎಂದು ಪೊಲೀಸ್‌ ಇಲಾಖೆ ಖಾತರಿ ಪಡಿಸಿತ್ತು. ಬಿಹಾರದ ವೈಶಾಲಿ ಜಿಲ್ಲೆಯ ಅಮನ್ ಕುಮಾರ್ ಹಾಗೂ ಅಲೋಕ್ ಕುಮಾರ್ ಅಲಿಯಾಸ್‌ ಅಶುತೋಷ್ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಿಸಿದೆ. ದುಷ್ಕೃತ್ಯ ನಡೆದು ತಿಂಗಳು ಕಳೆದ ಬಳಿಕ ಹಂತಕರ ಸಂಪೂರ್ಣ ಮಾಹಿತಿಯನ್ನು ಪೊಲೀಸ್ ಇಲಾಖೆ ಹೊರಹಾಕಿದೆ.

ಈ ಖದೀಮರು ಹಿಂದೆಯೂ ಕೂಡ ಬೀದರ್ ಮಾದರಿಯಲ್ಲಿ ದರೋಡೆ ಎಸಗಿದ್ದರು ಎಂದು ತಿಳಿದು ಬಂದಿದ್ದು, ಉತ್ತರ ಪ್ರದೇಶದಲ್ಲಿ 2023ರಲ್ಲಿ ಎಟಿಎಂ ವಾಹನದಲ್ಲಿ ಹಣ ದರೋಡೆ ಮಾಡಿದ ಆರೋಪಿಗಳಾಗಿದ್ದಾರೆ. ಈಗಾಗಲೇ ಆರೋಪಿಗಳ ಸುಳಿವಿಗಾಗಿ ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳು ಬಹುಮಾನ ಘೋಷಿಸಿವೆ. ಈಗ ಕರ್ನಾಟಕ ರಾಜ್ಯದಿಂದಲೂ ₹5 ಲಕ್ಷ ಬಹುಮಾನ ಘೋಷಣೆ ಮಾಡಿದೆ. ಮೂರು ರಾಜ್ಯದ ಪೊಲೀಸರ ನಿದ್ದೆಗೆಡಿಸಿರುವ ಈ ದರೋಡೆಕೊರರ ಪತ್ತೆಗೆ ಪೊಲೀಸ್ ಇಲಾಖೆ ಬಹುಮಾನದ ಮೊರೆ ಹೋಗಿದೆ. ಜ.16ರಂದು ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬುವ ವೇಳೆ ದಾಳಿ ನಡೆಸಿ ಹಣ ದರೋಡೆ ಮಾಡಿದ್ದರು. ಅಲ್ಲದೆ ತಡೆಯಲು ಬಂದ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದರು.