ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳ ಸಂಬಂಧ ನೇಮಿಸಿರುವ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಇನ್ನೆರಡು ದಿನಗಳಲ್ಲಿ ವರದಿ ಸಲ್ಲಿಸಲಿದ್ದು, ಅದನ್ನು ಆಧರಿಸಿ ಶೀಘ್ರ ಬಸ್ ಪ್ರಯಾಣ ದರ ಹೆಚ್ಚಿಸಲಾಗುವುದು
ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳ ಸಂಬಂಧ ನೇಮಿಸಿರುವ ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಇನ್ನೆರಡು ದಿನಗಳಲ್ಲಿ ವರದಿ ಸಲ್ಲಿಸಲಿದ್ದು, ಅದನ್ನು ಆಧರಿಸಿ ಶೀಘ್ರ ಬಸ್ ಪ್ರಯಾಣ ದರ ಹೆಚ್ಚಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟದಲ್ಲಿದ್ದು ಪ್ರಯಾಣ ದರ ಹೆಚ್ಚಳ ಮಾಡುವುದು ಅನಿವಾರ್ಯ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದೊಂದು ವರ್ಷದಲ್ಲಿ ನಾಲ್ಕು ಬಾರಿ ಡೀಸೆಲ್ ಬೆಲೆ ಹೆಚ್ಚಿಸಿದೆ. ಪ್ರತಿ ಲೀಟರ್ ಡೀಸೆಲ್ ಬೆಲೆ 15ರಿಂದ 16 ರು. ಹೆಚ್ಚಳವಾಗಿದ್ದು, ನಿಗಮಗಳಿಗೆ ವಾರ್ಷಿಕ 8000 ಕೋಟಿ ರು. ನಷ್ಟವಾಗುತ್ತಿದೆ ಎಂದರು.
ನಿಗಮಗಳ ಆರ್ಥಿಕ ಪರಿಸ್ಥಿತಿ ಅಧ್ಯಯನ
ಅತುಲ್ ತಿವಾರಿ ನೇತೃತ್ವದ ಸಮಿತಿ ನಿಗಮಗಳ ಆರ್ಥಿಕ ಪರಿಸ್ಥಿತಿ ಅಧ್ಯಯನ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ವರದಿ ನೀಡಲಿದೆ. ವರದಿಯನ್ನು ಸಚಿವ ಸಂಪುಟ ಸಭೆ ಮುಂದೆ ಮಂಡಿಸಲಾಗುವುದು. ಮುಖ್ಯಮಂತ್ರಿಗಳು ಸೇರಿ ಸಂಪುಟ ಅನುಮೋದಿಸಿದರೆ ಶೀಘ್ರದಲ್ಲಿ ಪ್ರಯಾಣ ದರ ಹೆಚ್ಚಳ ಮಾಡಲಾಗುವುದು ಎಂದು ಹೇಳಿದರು.
ಸ್ಮಾರ್ಟ್ ಕಾರ್ಡ್:
ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಬಸ್ ಸೇವೆ ನೀಡಲು ಸ್ಮಾರ್ಟ್‌ಕಾರ್ಡ್ ವಿತರಿಸಲಾಗುತ್ತದೆ. ಅನ್ಯ ರಾಜ್ಯದ ಮಹಿಳೆಯರೂ ಉಚಿತ ಪ್ರಯಾಣದ ಲಾಭ ಪಡೆಯುತ್ತಿದ್ದಾರೆ ಎಂಬ ವರದಿಗಳಿವೆ. ಅದನ್ನು ತಡೆಯಲು ಸ್ಮಾರ್ಟ್‌ಕಾರ್ಡ್ ಸಹಕಾರಿ. ಮೊದಲ ಹಂತದಲ್ಲಿ ಒಂದು ಕೋಟಿ ಮಹಿಳೆಯರಿಗೆ ಸ್ಮಾರ್ಟ್‌ಕಾರ್ಡ್ ನೀಡಲಾಗುವುದು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎರಡು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆಗೆ ಸಿದ್ಧವಾಗಲಿವೆ ಎಂದು ತಿಳಿಸಿದರು.


