ಸಾರಾಂಶ
ಎಟಿಎಂ ಯಂತ್ರದಿಂದ ಹಣ ವಿತ್‌ಡ್ರಾ ಆಗಿದೆಯೋ, ಇಲ್ಲವೋ ಎಂದು ತಿಳಿಯಲು ಎಟಿಎಂ ಕಿಯೋಸ್ಕ್‌ನಲ್ಲಿರುವ ಸಿಸಿ ಕ್ಯಾಮೆರಾ ವಿಡಿಯೋವನ್ನು ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು ಎಂದು ಬೆಂಗಳೂರು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹೇಳಿದೆ.
ಬೆಂಗಳೂರು : ಎಟಿಎಂ ಯಂತ್ರದಿಂದ ಹಣ ವಿತ್‌ಡ್ರಾ ಆಗಿದೆಯೋ, ಇಲ್ಲವೋ ಎಂದು ತಿಳಿಯಲು ಎಟಿಎಂ ಕಿಯೋಸ್ಕ್‌ನಲ್ಲಿರುವ ಸಿಸಿ ಕ್ಯಾಮೆರಾ ವಿಡಿಯೋವನ್ನು ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು ಎಂದು ಬೆಂಗಳೂರು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹೇಳಿದೆ.
ಎಟಿಎಂ ಯಂತ್ರದಿಂದ ಹಣ ಬಾರದೇ ಇದ್ದರೂ ಖಾತೆಯಿಂದ ₹10,000 ಕಡಿತವಾಗಿದ್ದ ಹಿನ್ನೆಲೆಯಲ್ಲಿ ಗ್ರಾಹಕರೊಬ್ಬರು ಸಲ್ಲಿಸಿದ್ದ ಪರಿಹಾರ ಅರ್ಜಿಯ ವಿಚಾರಣೆ ನಡೆಸಿದ ವೇದಿಕೆ, ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್‌ಗಳು ಜಂಟಿಯಾಗಿ ₹15,000 ಪರಿಹಾರ ಮತ್ತು ಗ್ರಾಹಕನ ₹10,000 ಮರುಪಾವತಿ ಮಾಡಬೇಕು ಎಂದು ಆದೇಶ ನೀಡಿದೆ.
ನಗರದ ಜಕ್ಕೂರು ನಿವಾಸಿ ಪದ್ಮಮ್ಮ ಎಂಬುವರ ಕಾರ್ಡ್ ಬಳಸಿ ಅವರ ಪತಿ ಕೆನರಾ ಬ್ಯಾಂಕ್ ಎಟಿಎಂನಲ್ಲಿ 2022ರ ಡಿ.5ರಂದು ₹10,000 ವಿತ್‌ಡ್ರಾ ಮಾಡಲು ಪ್ರಯತ್ನಿಸಿದ್ದರು. ವಹಿವಾಟು ನಿರಾಕರಿಸಲಾಗಿದೆ ಎಂದು ಯಂತ್ರದಿಂದ ಚೀಟಿ ಬಂದಿತ್ತು. ಕೆಲವು ದಿನಗಳ ಬಳಿಕ ಪಾಸ್‌ಬುಕ್ ಎಂಟ್ರಿ ಮಾಡಿಸಿದಾಗ ₹10,000 ಕಡಿತವಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ವಹಿವಾಟು ನಿರಾಕರಣೆಯ ಚೀಟಿ ಸಹಿತ ಬ್ಯಾಂಕ್‌ನ ಅಧಿಕಾರಿಗಳು ಮತ್ತು ಒಂಬುಡ್ಸಮನ್‌ಗೆ ಪದ್ಮಮ್ಮ ಮರುಪಾವತಿ ಕೋರಿ ದೂರು ನೀಡಿದ್ದರು. ಮರುಪಾವತಿ ಆಗದ ಕಾರಣ ಗ್ರಾಹಕರ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ, ಹಣ ವಿತ್‌ಡ್ರಾ ಆಗಿರುವ ಕುರಿತು ನಮ್ಮ ಬಳಿ ಕಂಪ್ಯೂಟರ್ ದಾಖಲೆ ಇವೆ. ಎಟಿಎಂ ಮಾನಿಟರಿಂಗ್ ಸೆಲ್‌ನಲ್ಲೂ ವಹಿವಾಟು ಯಶಸ್ವಿ ಆಗಿರುವುದು ಕಂಡು ಬಂದಿದೆ. ಹೀಗಾಗಿ ಪರಿಹಾರ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೆನರಾ ಬ್ಯಾಂಕ್ ಪ್ರತಿನಿಧಿ ವಾದಿಸಿದ್ದರು.
ಅರ್ಜಿದಾರರು ಘಟನೆ 90 ದಿನಗಳ ಒಳಗಾಗಿಯೇ ದೂರು ನೀಡಿದ್ದಾರೆ. ಹೀಗಾಗಿ, ಎರಡೂ ಬ್ಯಾಂಕ್‌ನ ಅಧಿಕಾರಿಗಳು ಪರಸ್ಪರ ಸಹಯೋಗದಲ್ಲಿ ಎಟಿಎಂ ಕಿಯೋಸ್ಕ್‌ನಲ್ಲಿರುವ ಸಿಸಿ ಕ್ಯಾಮೆರಾ ವಿಡಿಯೋ ಪರಿಶೀಲಿಸಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ, ಏಕೆ ನೋಡಿಲ್ಲ ಎಂಬುದು ಅವರಿಗೇ ಗೊತ್ತು. ಇನ್ನು ಗ್ರಾಹಕನೇ ವಿಡಿಯೋ ಪರಿಶೀಲಿಸಲು ಅರ್ಜಿ ಸಲ್ಲಿಸಬೇಕು ಎಂಬುದನ್ನು ನಿರೀಕ್ಷಿಸಲಾಗದು. ಎರಡೂ ಬ್ಯಾಂಕ್‌ಗಳ ಸೇವೆಯಲ್ಲಿ ಲೋಪವಾಗಿದೆ ಎಂದು ಅಭಿಪ್ರಾಯಪಟ್ಟ ವೇದಿಕೆ, ಪರಿಹಾರಕ್ಕೆ ಆದೇಶ ನೀಡಿದೆ.