ಸಾರಾಂಶ
ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಜಲಮಂಡಳಿಯಿಂದ ಜಾರಿಗೊಳಿಸಲಾದ ಕಾವೇರಿ 5ನೇ ಹಂತದ ಯೋಜನೆಗೆ ಬುಧವಾರ ಲೋಕಾರ್ಪಣೆಗೊಳ್ಳುತ್ತಿದೆ
ಬೆಂಗಳೂರು " ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಜಲಮಂಡಳಿಯಿಂದ ಜಾರಿಗೊಳಿಸಲಾದ ಕಾವೇರಿ 5ನೇ ಹಂತದ ಯೋಜನೆಗೆ ಬುಧವಾರ ಲೋಕಾರ್ಪಣೆಗೊಳ್ಳುತ್ತಿದೆ. ಆಮೂಲಕ ಮೊದಲ ಹಂತದಲ್ಲಿ 110 ಹಳ್ಳಿಗಳ 50 ಸಾವಿರ ನೀರಿನ ಸಂಪರ್ಕಕ್ಕೆ ಬುಧವಾರದಿಂದಲೇ ಕಾವೇರಿ ನೀರು ಪೂರೈಕೆ ಆರಂಭವಾಗಲಿದೆ.
ಕಳೆದ 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿದ್ದ ಬೆಂಗಳೂರು ಹೊರವಲಯದ 110 ಹಳ್ಳಿಗಳ ನಿವಾಸಿಗಳಿಗೆ ಈವರೆಗೆ ಬೋರ್‌ವೆಲ್ ಸೇರಿ ಇನ್ನಿತರ ನೀರಿನ ಮೂಲಗಳಿಂದ ನೀರು ಪೂರೈಸಲಾಗುತ್ತಿತ್ತು. ಅದಕ್ಕಾಗಿ, ಕಾವೇರಿ ನದಿ ನೀರನ್ನು ಪೂರೈಸುವ ಸಲುವಾಗಿ 2014ರಲ್ಲಿ ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದೀಗ ಈ ಯೋಜನೆ ಪೂರ್ಣಗೊಂಡಿದ್ದು, ಮೊದಲ ಹಂತದಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆದಿರುವ ಕಟ್ಟಡಗಳ ಪೈಕಿ 50 ಸಾವಿರ ಸಂಪರ್ಕಗಳಿಗೆ ನೀರು ಪೂರೈಕೆ ಆರಂಭಿಸಲಾಗುತ್ತಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ನೀರು ಸರಬರಾಜು ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅ. 16 ರಂದು ಚಾಲನೆ ನೀಡಲಿದ್ದಾರೆ.
‘ಮನೆಮನೆಗೂ ಕಾವೇರಿ ನೀರು-ಇದು ಸಮೃದ್ಧ ಬೆಂಗಳೂರು’:
ಆಮೆ ಗತಿಯಲ್ಲಿ ಸಾಗುತ್ತಿದ್ದ ಕಾವೇರಿ 5ನೇ ಹಂತದ ಕಾಮಗಾರಿಗೆ ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ವೇಗ ನೀಡಲಾಯಿತು. ಎತ್ತಿನಹೊಳೆ ಯೋಜನೆಯ ಮೊದಲನೇ ಹಂತ ಲೋಕಾರ್ಪಣೆ ನಂತರ ಇದೀಗ ಬೆಂಗಳೂರಿನ ನೀರಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
‘ಮನೆಮನೆಗೂ ಕಾವೇರಿ ನೀರು-ಇದು ಸಮೃದ್ಧ ಬೆಂಗಳೂರು’ ಘೋಷವಾಕ್ಯದ ಅಡಿಯಲ್ಲಿ ಜಲಮಂಡಳಿ ಕಾರ್ಯನಿರ್ವಹಿಸಿದೆ. ಯೋಜನೆ ಅಡಿಯಲ್ಲಿ ಅತ್ಯಾಧುನಿಕ ಹಾಗೂ ಬೃಹತ್ ನೀರಿನ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ನೆಟ್ಟಕಲ್ ಸಮತೋಲನಾ ಆಣೆಕಟ್ಟಿನಿಂದ ನೀರನ್ನು ಎತ್ತಿ ಟಿಕೆ ಹಳ್ಳಿ, ಹಾರೋಹಳ್ಳಿ, ತಾತಗುಣಿ ಪಂಪಿಂಗ್ ಸ್ಟೇಷನ್‌ಗಳ ಮೂಲಕ 4 ಲಕ್ಷ ನೀರಿನ ಸಂಪರ್ಕಗಳಿಗೆ ಕಾವೇರಿ ನೀರು ಪೂರೈಸುವಂತಾಗಲಿದೆ. ಈ ಯೋಜನೆಯಿಂದ 50 ಲಕ್ಷ ಜನರಿಗೆ ಅನುಕೂಲವಾಗಲಿದೆ. ಅಲ್ಲದೆ, ಈ ಯೋಜನೆ ಅಡಿಯಲ್ಲಿ ಹೆಚ್ಚುವರಿಯಾಗಿ 775 ಎಂಎಲ್‌ಡಿ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತದೆ.
ನೀರು ಪಡೆವ ಹಳ್ಳಿಗಳ ವಿವರ
ಯಶವಂತಪುರ ವಿಧಾನಸಭಾ ಕ್ಷೇತ್ರದ 13 ಹಳ್ಳಿಗಳಲ್ಲಿ 48 ಸಾವಿರ ಸಂಪರ್ಕ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 6 ಹಳ್ಳಿಗಳಲ್ಲಿ 37,500, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ 26 ಹಳ್ಳಿಗಳಲ್ಲಿ 73,500, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ 6 ಹಳ್ಳಿಗಳಲ್ಲಿ 96,750, ಮಹದೇವಪುರ ಕ್ಷೇತ್ರದ 33 ಹಳ್ಳಿಗಳಲ್ಲಿ 93,100 ನೀರಿನ ಸಂಪರ್ಕಗಳಿಗೆ ನೀರು ಪೂರೈಸಲಾಗುತ್ತದೆ. ಅದರ ಜತೆಗೆ ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ಕೆಆರ್ ಪುರ ವಿಧಾನಸಭಾ ಕ್ಷೇತ್ರಗಳ ವಿವಿಧ ಹಳ್ಳಿಗಳಿಗೂ ನೀರಿನ ಸಂಪರ್ಕ ಸಿಗಲಿದ್ದು, ಪ್ರತಿ ಮನೆಗೂ ಕಾವೇರಿ ನೀರು ಸರಬರಾಜು ಮಾಡುವ ಉದ್ದೇಶ ಕಾವೇರಿ 5ನೇ ಹಂತದ ಯೋಜನೆಯದ್ದಾಗಿದೆ.
₹4,336 ಕೋಟಿ ವೆಚ್ಚ
ಯೋಜನೆ ಕಾಮಗಾರಿಯಲ್ಲಿ ಜಪಾನ್ ಯಂತ್ರೋಪಕರಣ ಹಾಗೂ ಫ್ರೆಂಚ್ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಆಮೂಲಕ ಪ್ರತಿ ಹಂತದಲ್ಲೂ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. 2.4 ಕೋಟಿ ಮಾನವ ಗಂಟೆಗಳ ಶ್ರಮ ಈ ಯೋಜನೆ ಹಿಂದಿದೆ. 1.45 ಲಕ್ಷ ಮೆಟ್ರಿಕ್ ಟನ್ ಸ್ಟೀಲ್ ಪ್ಲೇಟ್‌ಗಳನ್ನು ಬಳಸಲಾಗಿದೆ. ಯೋಜನೆಗಾಗಿ 4,336 ಕೋಟಿ ರು. ವ್ಯಯಿಸಲಾಗಿದ್ದು, ಜೈಕಾದಿಂದ ಸಾಲ ಸೌಲಭ್ಯ ಪಡೆಯಲಾಗಿದೆ. ಮುಂದಿನ 10 ವರ್ಷಗಳಲ್ಲಿ ಜೈಕಾದಿಂದ ಪಡೆಯಲಾದ ಸಾಲವನ್ನು ಜಲಮಂಡಳಿ ತೀರಿಸಲಿದೆ.
ಅಕ್ರಮ ನೀರಿನ ಸಂಪರ್ಕಕ್ಕೆ ತಡೆ
ಕಾವೇರಿ 5ನೇ ಹಂತ ಸೇರಿದಂತೆ ಉಳಿದ ಹಂತಗಳಲ್ಲಿನ ಅಕ್ರಮ ನೀರಿನ ಸಂಪರ್ಕ ತಡೆಗೆ ಕಾವೇರಿ ನೀರು ಸಂಪರ್ಕದ ನೋಂದಣಿಗೆ ಜಲಮಂಡಳಿ ಪ್ರತಿ ಮನೆಗೂ ತೆರಳಲು ಉದ್ದೇಶಿಸಿದೆ. ಈ ವೇಳೆ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ನೀರಿನ ಸಂಪರ್ಕ ಪಡೆಯುವುದು ಸೇರಿದಂತೆ ಮತ್ತಿತರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಜತೆಗೆ ನೀರಿನ ಸಂಪರ್ಕಕ್ಕಾಗಿ ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಪ್ರಕ್ರಿಯೆಯಿಂದ ಅಕ್ರಮ ನೀರಿನ ಸಂಪರ್ಕಕ್ಕೆ ತಡೆಯೊಡ್ಡುವುದು ಜಲಮಂಡಳಿ ಉದ್ದೇಶವಾಗಿದೆ. ಅಲ್ಲದೆ, ಬೆಂಗಳೂರನ ನೀರಿನ ಕೊರತೆ ನೀಗಿಸುವ ನಿಟ್ಟಿನಲ್ಲಿ ಜಲಮಂಡಳಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.