ಸಾರಾಂಶ
ಎಂಎಲ್ಸಿ ಸಿ.ಟಿ.ರವಿ ಅವರು ಪೊಲೀಸರು ಬಂಧಿಸಿದ ಕುರಿತು ತನಿಖೆಯಾಗಲಿ, ಈಗಾಗಲೇ ವಿಷಯ ಕೋರ್ಟ್‌ನಲ್ಲಿದೆ. ಆದರೆ ಮಾಡಿದ ತಪ್ಪು ಮುಚ್ಚಿಕೊಳ್ಳಲು ಫೇಕ್ ಎನ್‌ಕೌಂಟರ್ ಅಂತ ಕತೆ ಕಟ್ಟುತ್ತಿದ್ದಾರೆ
ಬೆಂಗಳೂರು : ಎಂಎಲ್ಸಿ ಸಿ.ಟಿ.ರವಿ ಅವರು ಪೊಲೀಸರು ಬಂಧಿಸಿದ ಕುರಿತು ತನಿಖೆಯಾಗಲಿ, ಈಗಾಗಲೇ ವಿಷಯ ಕೋರ್ಟ್‌ನಲ್ಲಿದೆ. ಆದರೆ ಮಾಡಿದ ತಪ್ಪು ಮುಚ್ಚಿಕೊಳ್ಳಲು ಫೇಕ್ ಎನ್‌ಕೌಂಟರ್ ಅಂತ ಕತೆ ಕಟ್ಟುತ್ತಿದ್ದಾರೆ. ನೇರವಾದ ದಾರಿಯೆಂದರೆ ತಾವು ಬಳಸಿದ ಪದ ತಪ್ಪು ಎಂದು ಬಹಿರಂಗವಾಗಿ ಕ್ಷಮೆ ಕೇಳಿದರೆ ಚಾಪ್ಟರ್ ಕ್ಲೋಸ್ ಆಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿ, ಘಟನೆ ಕುರಿತು ಸಭಾಪತಿ ಬಸವರಾಜ ಹೊರಟ್ಟಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ. ಆದರೆ ದೇಶಭಕ್ತಿ, ಸಂಸ್ಕೃತಿ, ಇತಿಹಾಸದ ಬಗ್ಗೆ ದೊಡ್ಡದಾಗಿ ಬಿಜೆಪಿಯವರು ಮಾತನಾಡುತ್ತಾರೆ. ಚಿಂತಕರ ಚಾವಡಿ, ಹಿರಿಯರ ಮನೆ ಎನಿಸಿಕೊಂಡಿರುವ ವಿಧಾನ ಪರಿಷತ್‌ನಲ್ಲಿ ಇಂಥ ಪದ ಬಳಸಿರುವುದು ಘೋರ ಅಪರಾಧ. ಯಾವ ಹೆಣ್ಣುಮಗಳೂ ಷಡ್ಯಂತ್ರದಿಂದ ಇಂಥ ಪದ ಬಳಸಿದ್ದಾರೆಂದು ಹೇಳುವುದಿಲ್ಲ ಎಂದರು.
ಒಂದು ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೆರಳಿಸಿದ್ದರೂ ಇಂಥ ಶಬ್ದ ಬಳಸುವುದು ಸರಿಯೇ ಎಂದು ಪ್ರಶ್ನಿಸಿದ ಅವರು, ಸಂಸ್ಕೃತಿ ಬಗ್ಗೆ ಮಾತನಾಡುವವರು ಈ ಪದ ಬಳಸಿದ್ದು ಖಂಡನೀಯ ಎಂದರು. ಬಿಜೆಪಿಯವರು ಬೆಳಗಾವಿ ಚಲೋ ನಡೆಸಲು ಮುಂದಾಗಿರುವುದನ್ನು ನೋಡಿದರೆ ಅವರ ಬಳಿ ಬೇರೆ ಯಾವ ಬಂಡವಾಳವೂ ಇದ್ದಂತಿಲ್ಲ ಎಂಬುದು ಗೊತ್ತಾಗುತ್ತದೆ. ಜನ ಎಲ್ಲವನ್ನೂ ನೋಡುತ್ತಾರೆ ಎಂದು ಹೇಳಿದರು.