ಸಾರಾಂಶ
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ - ಅಮಾನತುಗೊಳಿಸಿದ್ದ ಐವರು ಪೊಲೀಸ್ ಅಧಿಕಾರಿಗಳ ಪೈಕಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ನಾಲ್ವರ ಅಮಾನತು ಆದೇಶವನ್ನು ರಾಜ್ಯಸರ್ಕಾರ ಹಿಂಪಡೆದಿದೆ.
ಬೆಂಗಳೂರು : ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಸಮೀಪ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ದುರ್ಘಟನೆಗೆ ಸಂಬಂಧಿಸಿ ಕರ್ತವ್ಯಲೋಪದ ಆರೋಪದ ಮೇಲೆ ಅಮಾನತುಗೊಳಿಸಿದ್ದ ಐವರು ಪೊಲೀಸ್ ಅಧಿಕಾರಿಗಳ ಪೈಕಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ನಾಲ್ವರ ಅಮಾನತು ಆದೇಶವನ್ನು ರಾಜ್ಯಸರ್ಕಾರ ಹಿಂಪಡೆದಿದೆ.
ದಯಾನಂದ್ ಅವರ ಜೊತೆಗೆ ಕೇಂದ್ರೀಯ ವಿಭಾಗದ ಡಿಸಿಪಿ ಟಿ.ಟಿ.ಶೇಖರ್, ಕಬ್ಬನ್ ಪಾರ್ಕ್ ಎಸಿಪಿ ಬಾಲಕೃಷ್ಣ ಮತ್ತು ಇನ್ಸ್‌ಪೆಕ್ಟರ್ ಎ.ಕೆ.ಗಿರೀಶ್ ಅವರ ಅಮಾನತು ವಾಪಸ್ ಪಡೆಯಲಾಗಿದೆ. ಈ ಎಲ್ಲಾ ಅಧಿಕಾರಿಗಳ ಮೇಲೆ ನಿಯಮಾನುಸಾರ ಶಿಸ್ತುಕ್ರಮ ಬಾಕಿ ಇರಿಸಿ, ತಕ್ಷಣದಿಂದ ಕರ್ತವ್ಯಕ್ಕೆ ಮರಳಿ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಆದೇಶಿಸಿದೆ.
ಇನ್ನು, ಹೆಚ್ಚುವರಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತು ಆದೇಶ ಹಿಂಪಡೆದ ಬಗ್ಗೆ ಆದೇಶದಲ್ಲಿ ಉಲ್ಲೇಖಿಸಿಲ್ಲ. ವಿಕಾಸ್ ಅವರು ತಮ್ಮ ಅಮಾನತು ಪ್ರಶ್ನಿಸಿ ಕೇಂದ್ರಿಯ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ಮೊರೆ ಹೋಗಿದ್ದರು. ಸಿಎಟಿ ಅವರ ಅಮಾನತು ಆದೇಶ ರದ್ದುಗೊಳಿಸಲು ಆದೇಶಿಸಿತ್ತು. ಆದರೆ ಸರ್ಕಾರ ಸಿಎಟಿ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಜೂ.4ರಂದು ನಡೆದಿದ್ದ ಕಾಲ್ತುಳಿತ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನೇತೃತ್ವದ ಮ್ಯಾಜಿಸ್ಟೀರಿಯಲ್ ತನಿಖಾ ತಂಡ ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ನೇತೃತ್ವದ ಏಕಸದಸ್ಯ ಆಯೋಗ ರಚಿಸಿತ್ತು. ಇದರ ಬಳಿಕ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಘಟನೆಗೆ ಸಂಬಂಧಿಸಿ ಕುನ್ಹಾ ಆಯೋಗದ ವರದಿ ಆಧರಿಸಿ ಆರ್‌ಸಿಬಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸೇರಿ ನಾಲ್ಕು ಖಾಸಗಿ ಕಂಪನಿಗಳು ಮತ್ತು ಅವುಗಳ ವಿವಿಧ ಪದಾಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕ್ರಮ ವಹಿಸಲು ಹಾಗೂ ಅಮಾನತು ಮಾಡಲಾಗಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ನಿರ್ಧರಿಸಿತ್ತು.
ಐಪಿಎಲ್ ವಿಜಯೋತ್ಸವ ಆಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ನಡೆದ ಕಾಲ್ತುಳಿತದಲ್ಲಿ 11 ಜನರ ಸಾವು
ಘಟನೆಗೆ ಹೊಣೆ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಸೇರಿ ಐವರ ಸಸ್ಪೆಂಡ್ ಮಾಡಿದ್ದ ಸರ್ಕಾರ
ಈ ಬಗ್ಗೆ ವಿಕಾಸ್ ಕುಮಾರ್ ವಿಕಾಸ್ ಮಾತ್ರ ಕೆಎಟಿ ಮೊರೆ ಸೇವೆಗೆ ಐಪಿಎಸ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದರು
ಈ ಹಿನ್ನೆಲೆ ಉಳಿದ ನಾಲ್ವರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಇರಿಸಿ, ಅಮಾನತು ರದ್ದುಪಡಿಸಿ ಆದೇಶ