ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ : ದೇಶಾದ್ಯಂತ ಸುತ್ತಾಡಲು ದರ್ಶನ್‌ಗೆ ಕೋರ್ಟ್‌ ಅಸ್ತು

| N/A | Published : Mar 01 2025, 09:56 AM IST

Actor Darshan

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ಗೆ ಜಾಮೀನು ನೀಡಿದ ಸಂದರ್ಭದಲ್ಲಿ ಪೂರ್ವಾನುಮತಿಯಿಲ್ಲದೆ ಸೆಷನ್ಸ್‌ ಕೋರ್ಟ್‌ ವ್ಯಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ ಎಂಬುದಾಗಿ ವಿಧಿಸಿದ್ದ ಷರತ್ತನ್ನು ಸಡಿಲಿಸಿರುವ ಹೈಕೋರ್ಟ್‌, ದೇಶವ್ಯಾಪಿ ಹೋಗಲು ಅನುಮತಿಸಿದೆ.

 ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ಗೆ ಜಾಮೀನು ನೀಡಿದ ಸಂದರ್ಭದಲ್ಲಿ ಪೂರ್ವಾನುಮತಿಯಿಲ್ಲದೆ ಸೆಷನ್ಸ್‌ ಕೋರ್ಟ್‌ ವ್ಯಾಪ್ತಿ ಬಿಟ್ಟು ಹೊರ ಹೋಗುವಂತಿಲ್ಲ ಎಂಬುದಾಗಿ ವಿಧಿಸಿದ್ದ ಷರತ್ತನ್ನು ಸಡಿಲಿಸಿರುವ ಹೈಕೋರ್ಟ್‌, ದೇಶವ್ಯಾಪಿ ಹೋಗಲು ಅನುಮತಿಸಿದೆ.

ಜಾಮೀನಿನ ಷರತ್ತು ಸಡಿಲಿಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರ ಪೀಠ ಈ ಆದೇಶ ಮಾಡಿದೆ. ಇದರಿಂದ ದರ್ಶನ್‌ ಇನ್ನು ಮುಂದೆ ದೇಶವ್ಯಾಪಿ ಎಲ್ಲಿ ಬೇಕಾದರೂ ಹೋಗಬಹುದಾಗಿದೆ. ಆದರೆ, ವಿದೇಶಕ್ಕೆ ತೆರಳುವಂತಿಲ್ಲ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಹೆಸರಾಂತ ನಟರಾಗಿದ್ದಾರೆ. ಅವರು ಶೂಟಿಂಗ್‌ಗಾಗಿ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ಇತರೆಡೆ ಸಂಚರಿಸಬೇಕಾಗುತ್ತದೆ. ಆದರೆ, ಸೆಷನ್ಸ್‌ ಕೋರ್ಟ್‌ ವ್ಯಾಪ್ತಿ ಬಿಟ್ಟು ಹೊರಹೋಗುವಂತಿಲ್ಲ ಎಂದು ಜಾಮೀನು ನೀಡುವಾಗ ಹೈಕೋರ್ಟ್‌ ಷರತ್ತು ವಿಧಿಸಿದೆ. ಹಾಗಾಗಿ, ನ್ಯಾಯಾಲಯ ಆ ಷರತ್ತನ್ನು ಸ್ವಲ್ಪ ಸಡಿಲಿಕೆ ಮಾಡಬೇಕು ಎಂದು ಕೋರಿದರು.

ಈ ಮನವಿಗೆ ಆಕ್ಷೇಪಿಸಿದ ತನಿಖಾಧಿಕಾರಿಗಳ ಪರ ವಿಶೇಷ ಅಭಿಯೋಜಕರಾದ ಪಿ.ಪ್ರಸನ್ನ ಕುಮಾರ್‌, ಜಾಮೀನು ಪಡೆಯುವಾಗ ಅರ್ಜಿದಾರರು ಅನಾರೋಗ್ಯದ ಕಾರಣ ನೀಡಿದ್ದರು. ಆದರೆ, ಇದೀಗ ದೇಶದೆಲ್ಲೆಡೆ ಸುತ್ತಾಡಲು ಬಯಸುತ್ತಿದ್ದಾರೆ. ನ್ಯಾಯಾಲಯ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಜಾಮೀನು ಷರತ್ತು ಸಡಿಲಿಸಿತು. ನ್ಯಾಯಾಲಯದ ಅನುಮತಿಯಿಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಆದೇಶಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ಪೊಲೀಸರು 2024ರ ಜೂ.11ರಂದು ಮೈಸೂರಿನಲ್ಲಿ ಬಂಧಿಸಿದ್ದರು. 2024ರ ಡಿ.13ರಂದು ಬೆನ್ನುಹುರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ನಟ ದರ್ಶನಕ್ಕೆ ಹೈಕೋರ್ಟ್‌ ಜಾಮೀನು ನೀಡಿತ್ತು. ಈ ವೇಳೆ ಸೆಷನ್ಸ್‌ ನ್ಯಾಯಾಲಯ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ ಎಂದು ಷರತ್ತು ವಿಧಿಸಿತ್ತು. ಹೈಕೋರ್ಟ್‌ ಜಾಮೀನು ನೀಡಿದ ನಂತರ ಮೈಸೂರಿಗೆ ತೆರಳಲು ಸೆಷನ್ಸ್‌ ನ್ಯಾಯಾಲಯ ದರ್ಶನ್‌ಗೆ ಮೂರು ಬಾರಿ ಅನುಮತಿ ನೀಡಿತ್ತು.