ಪೊಲೀಸರ ಅನುಮತಿ ನಿರಾಕರಣೆ ಹೊರತಾಗಿಯೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಶುಕ್ರವಾರ ದೆಹಲಿಯ ಕನಾಟ್‌ ಪ್ಲೇಸ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ತಿರಂಗಾ ಪ್ರತಿಭಟನೆ ವೇಳೆ ಭಾರಿ ನಾಟಕೀಯ ಬೆಳವಣಿಗಳಿಗೆ ಸಾಕ್ಷಿಯಾಯಿತು.

ನವದೆಹಲಿ : ಪೊಲೀಸರ ಅನುಮತಿ ನಿರಾಕರಣೆ ಹೊರತಾಗಿಯೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಶುಕ್ರವಾರ ದೆಹಲಿಯ ಕನಾಟ್‌ ಪ್ಲೇಸ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ತಿರಂಗಾ ಪ್ರತಿಭಟನೆ ವೇಳೆ ಭಾರಿ ನಾಟಕೀಯ ಬೆಳವಣಿಗಳಿಗೆ ಸಾಕ್ಷಿಯಾಯಿತು.

ಪ್ರತಿಭಟನಾ ಸ್ಥಳಕ್ಕೆ ಹೊರಟ ಸಿಜೆಪಿ ನಾಯಕ ಅಭಿಜೀತ್‌ ದೀಪ್ಕೆಯನ್ನು ಪೊಲೀಸರು ಅವರ ಮನೆಯಲ್ಲೇ ವಶಕ್ಕೆ ಪಡೆದರೆ, ಎಐಎಸ್‌ಎ ಅಧ್ಯಕ್ಷೆ ನೇಹಾ ಬೋರಾರನ್ನೂ ಮಂಡಿ ಹೌಸ್‌ ಬಳಿ ವಶಕ್ಕೆ ಪಡೆಯಲಾಯಿತು.

ಇದರ ಹೊರತಾಗಿಯೂ ನಗರದ ಹಲವು ಸ್ಥಳಗಳಲ್ಲಿ ಸಿಜೆಪಿ ಕಾರ್ಯಕರ್ತರು ದಿಢೀರ್‌ ಪ್ರತಿಭಟನೆ ನಡೆಸಿ ಪೊಲೀಸರಿಗೆ ಸವಾಲು ಒಡ್ಡುವ ಯತ್ನ ನಡೆಸಿದರು. ಅಂತಿಮವಾಗಿ 150ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು.

ವಶ:

ಶುಕ್ರವಾರ ಮಧ್ಯಾಹ್ನವೇ ದೀಪ್ಕೆಯ ಮನೆಗೆ ತೆರಳಿದ್ದ ಪೊಲೀಸರು ಪ್ರತಿಭಟನೆಗೆ ಮುಂದಾಗದಂತೆ ಸೂಚಿಸಿದ್ದರು. ಅನುಮತಿ ನಿರಾಕರಣೆ ಹೊರತಾಗಿಯೂ ಪ್ರತಿಭಟನೆ ನಡೆಸಿದರೆ ಅದು ವಾಹನ ಸಂಚಾರದಲ್ಲಿ ವ್ಯತ್ಯಯಕ್ಕೆ, ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಯಾಗುವ ಮತ್ತು ಕಾಲ್ತುಳಿತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಪೊಳೀಸರು ಎಚ್ಚರಿಸಿದ್ದರು.

ಆದರೆ ಸಂಜೆ ವೇಳೆ ನಾನು ಏಕಾಂಗಿಯಾಗಿ ಪ್ರತಿಭಟನೆ ನಡೆಸುವೆ ಎಂದು ದೀಪ್ಕೆ ಮನೆಯಿಂದ ಹೊರಗೆ ಕಾಲಿಡುತ್ತಲೇ ಅವರನ್ನು ವಶಕ್ಕೆ ಪಡೆದು ಪೊಲೀಸರು ಕರೆದೊಯ್ದರು.

150ಕ್ಕೂ ಹೆಚ್ಚು ಮಂದಿ ವಶ:

ಮತ್ತೊಂದೆಡೆ ಕನಾಟ್ ಪ್ಲೇಸ್‌ ತಲುಪಿದ್ದ ಪ್ರತಿಭಟನಾಕಾರರನ್ನೂ ಪೊಲೀಸರು ವಶಕ್ಕೆ ಪಡೆಯಲು ಪ್ರಾರಂಭಿಸಿದರು. ‘ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರಲು ಯತ್ನಿಸುತ್ತಿರುವವರನ್ನು ಬಂಧಿಸಲಾಗುತ್ತಿದೆ’ ಎಂದು ತಿಳಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಇದುವರೆಗೆ ಸುಮಾರು 150 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆ:

ಸಿಜೆಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಸುತ್ತಲೂ ಭದ್ರತಾ ಸಿಬ್ಬಂದಿ ಮಾನವ ಸರಪಳಿ ನಿರ್ಮಿಸಿ ಬಿಗಿ ಭದ್ರತೆ ಒದಗಿಸಿದ್ದರು. ಪೊಲೀಸರು ವಿವಿಧ ಗುಂಪುಗಳಿಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಲು ಅವಕಾಶ ನೀಡಿದರು. ಸಿಜೆಪಿ ಮತ್ತು ವಿವಿಧ ವಿದ್ಯಾರ್ಥಿ ಸಂಘಟನೆಗಳ ನೂರಾರು ಕಾರ್ಯಕರ್ತರು ಕನ್ನಾಟ್ ಪ್ಲೇಸ್ ಹಾಗೂ ಮಂಡಿ ಹೌಸ್‌ನಲ್ಲಿ ಜಮಾಯಿಸಿ, ಭಾರೀ ಪೊಲೀಸ್ ಬಂದೋಬಸ್ತ್ ನಡುವೆಯೂ ರಾಷ್ಟ್ರಧ್ವಜ ಹಾರಿಸಿ ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಿದರು.

ಆಪ್‌ನಿಂದಲೂ ತಿರಂಗಾ ರ್‍ಯಾಲಿ:

ಸಿಇಸಿ ಜ್ಞಾನೇಶ್‌ ರಾಜೀನಾಮೆಗೆ ಆಗ್ರಹಿಸಿ, ಆಮ್ ಆದ್ಮಿ ಪಕ್ಷ ಶುಕ್ರವಾರ ರಾಷ್ಟ್ರಪತಿ ಭವನ ಹಾಗೂ ಮಧ್ಯ ದೆಹಲಿಯಲ್ಲಿರುವ ತನ್ನ ಪ್ರಧಾನ ಕಚೇರಿಯ ಬಳಿ ತಿರಂಗಾ ಮೆರವಣಿಗೆ ನಡೆಸಿತು.

30000 ಪೊಲೀಸ್ ನಿಯೋಜನೆ:

ತಿರಂಗಾ ಮೆರವಣಿಗೆಯ ಹಿನ್ನೆಲೆಯಲ್ಲಿ, ದೆಹಲಿಯಲ್ಲಿ 6,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 220 ತುಕಡಿಗಳನ್ನು (22000) ನಿಯೋಜಿಸಲಾಗಿತ್ತು. ಇತರ ಜಿಲ್ಲೆಗಳಿಂದ ಹೆಚ್ಚುವರಿಯಾಗಿ 5,000 ಸಿಬ್ಬಂದಿಯನ್ನು ಕರೆತರಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ನೂರಾರು ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

- ಇತ್ತೀಚೆಗೆ ಜಂತರ್‌ ಮಂತರ್‌ನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ತಿರಂಗಾ ಹಾರಿಸಿದ್ದ ಜಿರಳೆ ಪಾರ್ಟಿ

- ಈ ವೇಳೆ ಪಕ್ಷದ ನಾಯಕರಾದ ಸೌರವ್‌ ದಾಸ್‌, ಅಭಿಜೀತ್‌ ರಾಂಕಾರನ್ನು ಬಂಧಿಸಿದ್ದ ಪೊಲೀಸ್‌

- ಇದನ್ನು ಪ್ರತಿಭಟಿಸಿ ಪಕ್ಷದಿಂದ ನಿನ್ನೆ ದೆಹಲಿಯ ಕನಾಟ್‌ ಪ್ಲೇಸ್‌ನಲ್ಲಿ ತ್ರಿವರ್ಣಧ್ವಜ ಯಾತ್ರೆ

- ಯಾತ್ರೆ ನಡೆಸದಂತೆ ಪೊಲೀಸರಿಂದ ದೀಪ್ಕೆ ಮನವೊಲಿಕೆ ಯತ್ನ, ಆದರೆ ಇದಕ್ಕೆ ಒಪ್ಪದ ದೀಪ್ಕೆ

- ಸಂಜೆ ಯಾತ್ರೆಗೆ ಹೊರಟ ದೀಪ್ಕೆ, ನೇಹಾ ಬೋರಾ ಸೇರಿ 150 ಜಿರಳೆ ಬೆಂಬಲಿಗರು ವಶಕ್ಕೆ

- ಕೆಲವೆಡೆ ತಳ್ಳಾಟ-ನೂಕಾಟ ನಿರ್ಮಾಣ. ಇದರ ನಡುವೆ ಕೈಯಲ್ಲಿ ತ್ರಿರಂಗಾ ಹಿಡಿದು ಮೆರವಣಿಗೆ

- ತ್ರಿವರ್ಣಧ್ವಜ ಹಾರಿಸುವುದೂ ಅಪರಾಧವೆ?: ಜಿರಳೆ ನಾಯಕರು, ವಿಪಕ್ಷ ನಾಯಕರ ಆಕ್ರೋಶ