ಮಳೆ ಹಾನಿ ಪ್ರದೇಶದಲ್ಲಿ ಆಯುಕ್ತರ ತಲಾಶ್‌ : ರಸ್ತೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಸುತ್ತಾಟ

| N/A | Published : May 19 2025, 07:04 AM IST

Bengaluru rains
ಮಳೆ ಹಾನಿ ಪ್ರದೇಶದಲ್ಲಿ ಆಯುಕ್ತರ ತಲಾಶ್‌ : ರಸ್ತೆಯಲ್ಲಿ ಟ್ರ್ಯಾಕ್ಟರ್‌ನಲ್ಲಿ ಸುತ್ತಾಟ
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಶನಿವಾರ ಭಾರೀ ಮಳೆ ಬಂದು ಹಾನಿಗೆ ಒಳಗಾದ ಪ್ರದೇಶಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅಧಿಕಾರಿಗಳೊಂದಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.

  ಬೆಂಗಳೂರು :  ನಗರದಲ್ಲಿ ಶನಿವಾರ ಭಾರೀ ಮಳೆ ಬಂದು ಹಾನಿಗೆ ಒಳಗಾದ ಪ್ರದೇಶಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅಧಿಕಾರಿಗಳೊಂದಿಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮುಖ್ಯ ಆಯುಕ್ತರಿಗೆ ಮಹಿಳೆಯೊಬ್ಬಳು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಸಾಯಿಲೇಔಟ್‌, ಮಾನ್ಯತಾ ಟೆಕ್‌ಪಾರ್ಕ್‌, ನಾಗವಾರ ಜಂಕ್ಷನ್ ಸೇರಿದಂತೆ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ಒಂದು ವಾರದಿಂದ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಮಹದೇವಪುರ ವ್ಯಾಪ್ತಿಯ ಸಾಯಿ ಲೇಔಟ್‌ನಲ್ಲಿ ಮತ್ತೆ ಭಾರೀ ಪ್ರಮಾಣದ ನೀರು ರಸ್ತೆಯಲ್ಲಿ ನಿಂತುಕೊಂಡು ಮನೆಗಳಿಗೂ ನುಗ್ಗಿ ನಿವಾಸಿಗಳನ್ನು ಜಲದಿಗ್ಬಂಧನಕ್ಕೆ ಒಳಪಡಿಸಿದೆ. ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು. ಈ ವೇಳೆ ಇಡೀ ರಸ್ತೆಯಲ್ಲಿ ಸುಮಾರು ಒಂದೂವರೆಯಿಂದ ಎರಡು ಅಡಿಯಷ್ಟು ನೀರು ನಿಂತುಕೊಂಡ ಹಿನ್ನೆಲೆಯಲ್ಲಿ ಮಹೇಶ್ವರ್‌ ರಾವ್‌ ಟ್ರ್ಯಾಕ್ಟರ್‌ನಲ್ಲಿ ತೆರಳಿದರು.

ಆಗ ಟ್ರ್ಯಾಕ್ಟರ್‌ ಅಡ್ಡಗಟ್ಟಿದ ಮಹಿಳೆಯೊಬ್ಬರು ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರನ್ನು ತರಾಟೆಗೆ ತೆಗೆದುಕೊಂಡು, ಇಂಗ್ಲಿಷ್‌ನಲ್ಲಿ ನಿಮ್ಮ ಹೆಸರೇನು, ನೀವು ಬಿಬಿಎಂಪಿ ಆಯುಕ್ತರಾ ಎಂದು ಪ್ರಶ್ನಿಸಿದರು.

ಮಳೆ ಬಂದರೆ ಭಾರೀ ಪ್ರಮಾಣ ನೀರು ಶೇಖರಣೆಯಾಗುತ್ತಿದೆ. ಬಿಬಿಎಂಪಿಗೆ ಪೋನ್‌ ಮಾಡಿದರೆ ಸ್ಪಂದಿಸುವುದಿಲ್ಲ. ಪ್ರತಿ ಮಳೆಗೂ ಇದೇ ಪರಿಸ್ಥಿತಿಯಾಗಿದೆ. ಅಧಿಕಾರಿಗಳು ಭೇಟಿ ನೀಡಿದಾಗ ಈ ಬಾರಿ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಭರವಸೆ ನೀಡಿ ಹೋಗುತ್ತಾರೆ. ಇನ್ನು ಮನೆಗೆ ಪ್ರತಿ ವರ್ಷ 10 ಸಾವಿರ ರು. ಆಸ್ತಿ ತೆರಿಗೆ ಪಾವತಿ ಮಾಡುತ್ತೇವೆ. ಚುನಾವಣೆ ಬಂದರೆ ಮತ ಹಾಕುತ್ತೇವೆ. ಈ ಬಾರಿ ಕಸದ ಶುಲ್ಕ ಬೇರೆ ಪಾವತಿ ಮಾಡುತ್ತಿದ್ದೇವೆ. ಆದರೆ, ಮಳೆ ಬಂದಾಗ ಮತ್ತದೇ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವುದಾಗಿ ಸಮಾಧಾನ ಪಡಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌, ಸಾಯಿಲೇಔಟ್ ಅನ್ನು ಬಿಡಿಎ ಅಭಿವೃದ್ಧಿಪಡಿಸಿದ್ದು, ಸಾಯಿ ಲೇಔಟ್ ಪ್ರದೇಶವು ರಾಜಕಾಲುವೆಗಿಂದ ತುಂಬಾ ಕೆಳ ಮಟ್ಟದಲ್ಲಿರುವ ಕಾರಣ ಜಲಾವೃತವಾಗುತ್ತಿದೆ. ರಾಜಕಾಲುವೆ ಹಾದುಹೋಗುವ ಜಾಗದಲ್ಲಿ ರೈಲ್ವೆ ಹಳಿ ಕೆಳಗಿರುವ ನೀರು ಹರಿಯವ ಮಾರ್ಗ ಸಣ್ಣದಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಆಗುತ್ತಿಲ್ಲ. ಈ ಕುರಿತು ರೈಲ್ವೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾಲುವೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯ ಇರುವ ನೀರನ್ನು ಪಂಪ್‌ ಮಾಡಿ ಹೊರ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಾಯಿಲೇಔಟ್ ಸ್ಥಳೀಯರ ಅಹವಾಲುಗಳನ್ನು ಆಲಿಸಲಾಗಿದ್ದು, ಜಲಾವೃತವಾಗುವುದನ್ನು ತಪ್ಪಿಸಲು ತಾತ್ಕಾಲಿಕವಾಗಿ ಸಂಪ್ ನಿರ್ಮಿಸಿ ಅಲ್ಲಿ ತುಂಬುವ ನೀರನ್ನು ಹೊರ ಹಾಕಲು ಪಂಪ್ ಸೆಟ್ ವ್ಯವಸ್ಥೆ ಮಾಡಲಾಗಿದೆ. ನಿರ್ವಹಣೆಗೆ ತಂಡವನ್ನೂ ನಿಯೋಜಿಸಲಾಗುವುದು. ವಿಪತ್ತು ನಿರ್ವಹಣೆ ಅಡಿ ನೀರು ನುಗ್ಗಿರುವ ಮನೆಗಳನ್ನು ಗುರುತಿಸಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಟ್ರ್ಯಾಕ್ಟರ್ ಹತ್ತಿ ಸಾಯಿಲೇಔಟ್ ವೀಕ್ಷಣೆ

ಸಾಯಿಲೇಔಟ್‌ನ ರಸ್ತೆಯ ತುಂಬಾ ನೀರು ನಿಂತುಕೊಂಡಿರುವುದರಿಂದ ಟ್ರ್ಯಾಕ್ಟರ್ ಮೇಲೆ ಕುಳಿತುಕೊಂಡು ಪರಿಶೀಲನೆ ನಡೆಸಿ, ಎಲ್ಲೆಲ್ಲಿ ನೀರು ನಿಂತಿದೆಯೋ ಅದನ್ನೆಲ್ಲಾ ಪಂಪ್ ಗಳ ಮೂಲಕ ತ್ವರಿತವಾಗಿ ನೀರು ಹೊರ ಹಾಕುವ ವ್ಯವಸ್ಥೆಗೆ ಸೂಚಿಸಿದರು.

ಮಾನ್ಯತಾ ಟೆಕ್ ಬಳಿಯ ಮಾನ್ಫೋ ಹತ್ತಿರ ರಾಜಕಾಲುವೆ ಸಂಪರ್ಕ ಸರಿಯಾಗಿಲ್ಲದ ಕಾರಣ ಜಲಾವೃತವಾಗುತ್ತದೆ. ಹೊಸದಾಗಿ ಕಾಲುವೆ ನಿರ್ಮಾಣಕ್ಕೆ ಮಾನ್ಯತಾ, ಇಬಿಎಸ್ ಐಟಿ ಪಾರ್ಕ್, ಮ್ಯಾನ್ಫೋ, ಕಾರ್ಲೆ ಇನ್ಫಾಟೆಕ್ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಮೆಟ್ರೋ ಕಾಮಗಾರಿಯಿ ನಾಗವಾರ ಜಂಕ್ಷನ್ ಜಲಾವೃತವಾಗುತ್ತಿದ್ದು, ಅದನ್ನು ತಪ್ಪಿಸಲು ರಾಜಕಾಲುವೆಯನ್ನು ನಿರಂತರವಾಗಿ ಸ್ವಚ್ಛತೆ ಕಾಪಾಡಬೇಕೆಂದು ಮೆಟ್ರೋ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಮಹದೇವಪುರ ವಲಯ ಆಯುಕ್ತ ರಮೇಶ್, ಯಲಹಂಕ ವಲಯ ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿಮ್ ಸೇರಿದಂತೆ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳಿದ್ದರು.

 ನಿನ್ನೆಯೂ ನಗರದಲ್ಲಿ ಧಾರಾಕಾರ ಮಳೆ 

ರಾಜಧಾನಿ ಬೆಂಗಳೂರಿನಲ್ಲಿ ಸಂಜೆಯ ಧಾರಾಕಾರ ಮಳೆ ರಜೆ ದಿನವಾದ ಭಾನುವಾರವೂ ಮುಂದುವರಿದಿದ್ದು, ರಜೆಯ ಮಜಾ ಮಾಡುವುದಕ್ಕೆ ಹೊರಗೆ ಬಂದವರು ಪರದಾಡಬೇಕಾಯಿತು.

ಶನಿವಾರ ಸಂಜೆ ಆರಂಭವಾದ ಮಳೆ ತಡರಾತ್ರಿವರೆಗೆ ನಿಂತಿರಲಿಲ್ಲ. ತಗ್ಗು ಪ್ರದೇಶಗಳಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿತ್ತಲ್ಲದೆ, 30ಕ್ಕೂ ಹೆಚ್ಚು ಮರಗಳು ಧರಾಶಾಹಿಯಾಗಿದ್ದವು. ಇನ್ನು ರಸ್ತೆಗಳೆಲ್ಲಾ ನೀರುಮಯವಾಗಿ ಕೆರೆಗಳಂತಾಗಿತ್ತು. ಮತ್ತೆ ಭಾನುವಾರವೂ ಮಳೆ ಸುರಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಯಿತು.

ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್ ವೃತ್ತ, ಜಯನಗರ, ಕೆಆರ್ ಮಾರ್ಕೆಟ್, ಚಾಮರಾಜಪೇಟೆ, ವಿಜಯನಗರ, ಚಂದ್ರಾಲೇಔಟ್ ರಾಜಾಜಿನಗರ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಆರ್ ಆರ್ ನಗರ, ನಾಯಂಡಹಳ್ಳಿ, ಬಿಟಿಎಂ ಲೇಔಟ್, ಯಶವಂತಪುರ, ಪೀಣ್ಯ, ಮೈಕೋ ಲೇಔಟ್ ಹಾಗೂ ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ.

ಭಾರಿ ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಟ ನಡೆಸುವಂತಾಯಿತು. ಕೆಲವು ಭಾಗದಲ್ಲಿ ರಸ್ತೆಯಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಂತ ಪರಿಣಾಮ ದ್ವಿಚಕ್ರ ವಾಹನ ಸವಾರರು ಮುಂದೆ ಸಾಗಲಾಗದೆ ಸಂಕಷ್ಟಕ್ಕೆ ಸಿಲುಕಿದರು.

Read more Articles on