ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನವನ್ನು ಭಯೋತ್ಪಾದಕತೆಗೆ ಹೋಲಿಸಿದ್ದಾರೆಂದು ಆರೋಪ

ಬೆಂಗಳೂರು : ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನವನ್ನು ಭಯೋತ್ಪಾದಕತೆಗೆ ಹೋಲಿಸಿದ್ದಾರೆಂದು ಆರೋಪಿಸಿ ಖ್ಯಾತ ಗಾಯಕ ಸೋನು ನಿಗಮ್‌ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರನ್ನು ಅವಮಾನಿಸಿರುವ ಸೋನು ನಿಗಮ್‌ರನ್ನು ಕನ್ನಡ ಚಿತ್ರರಂಗದಿಂದಲೇ ನಿರ್ಬಂಧಿಸಬೇಕು, ಅವರನ್ನು ಬಂಧಿಸಬೇಕು ಎಂದು ಒತ್ತಾಯ ಕೇಳಿಬರುತ್ತಿದೆ.

ಇದಕ್ಕೆ ಧ್ವನಿಗೂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದ್ದಕ್ಕೆ ಗಾಯಕ ಸೋನು ನಿಗಮ್‌ ʻಇದಕ್ಕೇನೇ, ಪಹಲ್ಗಾಮ್‌ ನಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದುʼ ಎಂದು ಹೇಳಿದ್ದಾರೆ. ಕರ್ನಾಟಕ ಪೊಲೀಸರು ಈ ಕೂಡಲೇ ಸೋನು ನಿಗಮ್‌ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡದಲ್ಲಿ ಹಾಡು ಹೇಳಿ ಎಂದು ಕೇಳಿದರೆ ಅದು ಹೇಗೆ ಭಯೋತ್ಪಾದಕ ದಾಳಿಗೆ ಕಾರಣವಾಗುತ್ತದೆ? ಕನ್ನಡದ ಅನ್ನ ತಿಂದು ಕೊಬ್ಬಿರುವ ಸೋನು ನಿಗಮ್‌ ಅವರಿಗೆ ಇನ್ನು ಮುಂದೆ ಕರ್ನಾಟಕದಲ್ಲಿ ಶೋಗಳನ್ನು ನಡೆಸಲು ಬಿಡುವುದಿಲ್ಲ. ಕರ್ನಾಟಕದ ಯಾವ ನಿರ್ಮಾಪಕರೂ ಇವರಿಂದ ಹಾಡು ಹಾಡಿಸಬಾರದು. ಯಾವುದೇ ಸಂಸ್ಥೆಗಳು ಇವರ ಶೋ ನಡೆಸಲು ಮುಂದಾಗಬಾರದು. ಒಂದು ವೇಳೆ ಯಾರಾದರೂ ಈ ದುಸ್ಸಾಹಸ ಮಾಡಿದರೆ ಅವರೇ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸೋನು ನಿಗಮ್‌ ನೀಡಿರುವ ಹೇಳಿಕೆ ಕನ್ನಡಿಗರನ್ನು ಕೀಳಾಗಿ ಮಾಡಿರುವುದಷ್ಟೇ ಅಲ್ಲ, ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಅವರನ್ನು ಖಳನಾಯಕರನ್ನಾಗಿ ಮಾಡುವ ಹುನ್ನಾರದಂತಿದೆ. ಹೀಗಾಗಿ ಅವರ ಮೇಲೆ ಕೂಡಲೇ ದೂರು ದಾಖಲಾಗಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟಕ್ಕೆ ಕೈ ಹಾಕಬೇಕಾಗುತ್ತದೆ. ಇಂತಹ ಕೃತಘ್ನರನ್ನು ಕರ್ನಾಟಕದ ನೆಲದಲ್ಲಿ ಅನ್ನ ಹಾಕಿ ಸಾಕುವುದನ್ನು ಇನ್ನು ಮುಂದಾದರೂ ಕೈಬಿಡಬೇಕು ಎಂದು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಹಾಡಿನ ಬೇಡಿಕೆಯನ್ನು ಭಯೋತ್ಪಾದಕರ ದಾಳಿಗೆ ಹೋಲಿಸುವುದು ಭಯೋತ್ಪಾದಕ ಮನಸ್ಥಿತಿ. ಪಹಲ್ಗಾಂನಲ್ಲಿ ನಡೆದದ್ದು ಭಯೋತ್ಪಾದಕ ದಾಳಿ. ಹಿಂದಿ ಹೇರುವುದು ಕೂಡ ಅದೇ ರೀತಿಯ ಕೃತ್ಯ. ಹಿಂದಿಯ ಕುರಿತ ದೇಶದ ಜನರ ಮನಸ್ಥಿತಿ ಬದಲಾಗಬೇಕಿದೆ.

- ಆಲ್‌ರೌಂಡರ್‌ ಅನಾಲಿಸ್ಟ್‌---

ಇವ್ನು ಮತ್ತೆ ಇಲ್ಲಿ ಯಾವ್ದೇ ಕಾರ್ಯಕ್ರಮ ಮಾಡ್ ಬಾರದು, ಇವ್ನಿಗೆ ಯಾರು ಇಲ್ ಕೆಲ್ಸಾ ಕೊಡ್ಬಾರದು - ನಾಳೆ ಬಂದು ಕ್ಷಮಿಸಿ ಅಂತ ನಾಟಕ ಮಾಡಿದ್ರೂ ಓಪ್ಪುವುದು ಬೇಡ.

- ಸಿಟಿಜನ್‌ ಆಫ್‌ ಕನ್ನಡನಾಡು

ಆಗಿದ್ದೇನು?

ಬೆಂಗಳೂರಿನ ಕಾಲೇಜೊಂದರಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಹಿಂದಿ ಹಾಡು ಹಾಡುತ್ತಿದ್ದರು. ಆಗ ಯುವಕನೊಬ್ಬ ಕನ್ನಡ ಕನ್ನಡ ಎಂದು ಪಟ್ಟುಹಿಡಿಯುವಂತೆ ಬೇಡಿಕೆ ಇಟ್ಟ. ಯುವಕನ ವರ್ತನೆಯಿಂದ ಬೇಸತ್ತ ಸೋನು ನಿಗಮ್‌ ಅವರು ತಾಳ್ಮೆಕಳೆದುಕೊಂಡು ಮಾತನಾಡಿದ್ದರು.