ಕೇರಳ ಮೂಲದ ಅಶ್ರಫ್‌ ಎಂಬಾತ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆ  ಇನ್‌ಸ್ಪೆಕ್ಟರ್ ಶಿವಕುಮಾರ್, ಹೆಡ್‌ ಕಾನ್‌ಸ್ಟೇಬಲ್ ಚಂದ್ರ ಪಿ.ಮತ್ತು ಕಾನ್‌ಸ್ಟೇಬಲ್ ಎಲ್ಲಾಲಿಂಗ ಅವರ  ಅಮಾನತು 

ಮಂಗಳೂರು: ‘ಪಾಕಿಸ್ತಾನ ಜಿಂದಾಬಾದ್‌’ ಎಂದು ಕೂಗಿದ ಎಂಬ ಆರೋಪದ ಮೇರೆಗೆ ಮಂಗಳೂರು ಹೊರವಲಯದ ಕುಡುಪುವಿನಲ್ಲಿ ಗುಂಪು ಹಲ್ಲೆಗೊಳಗಾಗಿ ಕೇರಳ ಮೂಲದ ಅಶ್ರಫ್‌ ಎಂಬಾತ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್, ಹೆಡ್‌ ಕಾನ್‌ಸ್ಟೇಬಲ್ ಚಂದ್ರ ಪಿ.ಮತ್ತು ಕಾನ್‌ಸ್ಟೇಬಲ್ ಎಲ್ಲಾಲಿಂಗ ಅವರನ್ನು ಅಮಾನತುಗೊಳಿಸಲಾಗಿದೆ. 

ಕಳೆದ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದಾಗ ಅಶ್ರಪ್‌ ಪಾಕಿಸ್ಥಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವರು ಗುಂಪು ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ, ಆತ ಮೃತಪಟ್ಟಿದ್ದ. ಈ ಸಂಬಂಧ ಈವರೆಗೆ 20 ಮಂದಿಯನ್ನು ಬಂಧಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ವರದಿಯ ಆಧಾರದಲ್ಲಿ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಮೂವರನ್ನು ಅಮಾನತು ಮಾಡಿ ಪೊಲೀಸ್‌ ಕಮಿಷನರ್‌ ಆದೇಶಿಸಿದ್ದಾರೆ.

ಈ ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಕೊಣಾಜೆ, ಬರ್ಕೆ, ಕಂಕನಾಡಿ ನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.