ಸಾರಾಂಶ
ಕಳೆದೊಂದು ವಾರದಿಂದ ನಿರಂತರ ಮಳೆ, ಮೋಡದ ವಾತಾವರಣದಿಂದಾಗಿ ನಗರದಲ್ಲಿ ವೈರಲ್ ಫೀವರ್ ಹೆಚ್ಚಾಗಿದ್ದು, ಸಾಮಾನ್ಯಕ್ಕಿಂತ ಶೇ. 10ರಷ್ಟು ಹೆಚ್ಚಾಗಿ ಮಕ್ಕಳಲ್ಲಿ ಜ್ವರ ಬಾಧಿಸುತ್ತಿದೆ.
ಬೆಂಗಳೂರು : ಕಳೆದೊಂದು ವಾರದಿಂದ ನಿರಂತರ ಮಳೆ, ಮೋಡದ ವಾತಾವರಣದಿಂದಾಗಿ ನಗರದಲ್ಲಿ ವೈರಲ್ ಫೀವರ್ ಹೆಚ್ಚಾಗಿದ್ದು, ಸಾಮಾನ್ಯಕ್ಕಿಂತ ಶೇ. 10ರಷ್ಟು ಹೆಚ್ಚಾಗಿ ಮಕ್ಕಳಲ್ಲಿ ಜ್ವರ ಬಾಧಿಸುತ್ತಿದೆ.
ಮಳೆಗಾಲ ಆರಂಭದಿಂದ ಒಂದು ವಾರ ಮಳೆ ಮತ್ತೊಂದು ವಾರ ಬಿಸಿಲು ಶೆಕೆಯ ವಾತಾವರಣ ಜನರನ್ನು ಹೈರಾಣು ಮಾಡಿತ್ತು. ಆದರೆ ಈಗ ಕಳೆದ ಒಂದು ವಾರದಿಂದ ಮಳೆ, ಚಳಿಯ ವಾತಾವರಣ ಇದೆ. ಬದಲಾಗುತ್ತಿರುವ ಬೆಂಗಳೂರಿನ ಹವಾಮಾನದಿಂದ ಬೆಂಗಳೂರಿನ ಜನರಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿವೆ. ಜೊತೆಗೆ ಸಾರಿ ವೈರಾಣು ಜ್ವರ ಪ್ರಕರಣ ಹೆಚ್ಚಾಗಿದೆ.
ಮಕ್ಕಳು ಜ್ವರ, ಕೆಮ್ಮು, ಗಂಟಲು ನೋವು, ಶೀತ, ನೆಗಡಿ, ವಾಂತಿಯಿಂದ ಬಳಲುತ್ತಿರುವುದು ಕಂಡುಬರುತ್ತಿದೆ. ಬದಲಾದ ಹವಾಮಾನ ಹಿನ್ನೆಲೆಯಲ್ಲಿ ಡೆಂಘೀ, ಟೈಫಾಯ್ಡ್, ವೈರಲ್ ಜ್ವರ ಕೂಡ ಕಾಣಿಸಿಕೊಳ್ಳುತ್ತಿದೆ. ಜ್ವರ, ಕೆಮ್ಮು, ನೆಗಡಿ, ಅತಿಸಾರ, ವಾಂತಿ, ಬೇಧಿ ಪ್ರಕರಣಗಳು ಹೆಚ್ಚಾಗುತ್ತಿವೆ. ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಶೇ.15-20 ರಷ್ಟು ಜ್ವರದ ಪ್ರಕರಣ ಏರಿಕೆ ಕಂಡು ಬರುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದೊಡ್ಡವರಲ್ಲೂ ಜ್ವರ
ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಮಾತನಾಡಿ, ಮಕ್ಕಳಲ್ಲಿ ಮಾತ್ರವಲ್ಲದೆ ದೊಡ್ಡವರಲ್ಲೂ ಒಂದಿಷ್ಟು ಮಟ್ಟಿಗೆ ಹೆಚ್ಚಾಗಿ ವೈರಲ್ ಫೀವರ್ ಕಾಣಿಸಿಕೊಂಡಿದೆ. ಗಂಭೀರ ಸಮಸ್ಯೆ ಅಲ್ಲದಿದ್ದರೂ ಮೂರ್ನಾಲ್ಕು ದಿನಗಳ ಕಾಲ ಜ್ವರ, ನೆಗಡಿ ಕಾಡುತ್ತಿದೆ ಎಂದು ಹೇಳಿದರು.
ವಾಣಿವಿಲಾಸ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ. ಮಾತನಾಡಿ, ತಂಪಾದ ವಾತಾವರಣದಿಂದಾಗಿ ನೆಗಡಿ, ಜ್ವರದಿಂದ ಬಳಲುವ ಗರ್ಭಿಣಿಯರ ಸಂಖ್ಯೆ ತುಸು ಹೆಚ್ಚಾಗಿದೆ. ಒಪಿಡಿ ವಿಭಾಗಕ್ಕೆ ಬಂದು ತೋರಿಸಿಕೊಂಡು ಹೋಗುತ್ತಿದ್ದು, ಸಾಮಾನ್ಯವಾಗಿ ರೆಸ್ಪಿರೆಟ್ರಿ ವೈರಸ್‌ನಿಂದ ಉಂಟಾಗುವ ಅನಾರೋಗ್ಯ ಇದಾಗಿದೆ ಎಂದು ಹೇಳಿದರು.
ಕೆ.ಸಿ. ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಸಿ ವಿ ರಾಮನ್ ನಗರ ಆಸ್ಪತ್ರೆ, ವಾಣಿವಿಲಾಸ್ ಆಸ್ಪತ್ರೆ ಸೇರಿ ಬಹುತೇಕ ಆಸ್ಪತ್ರೆಗಳ ಒಪಿಡಿಗೆ ಬರುವ ಅರ್ಧಕ್ಕಿಂತ ಹೆಚ್ಚು ರೋಗಿಗಳು ವೈರಾಣು ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಆರೋಗ್ಯದ ಬಗ್ಗೆ ಜನರು ಕೊಂಚ ಎಚ್ಚರ ವಹಿಸುವುದು ಅಗತ್ಯ ಎಂದು ವೈದ್ಯರು ತಿಳಿಸಿದರು.
ಮಕ್ಕಳಲ್ಲಿ ಶೇ.5-10 ರಷ್ಟು ಈ ವೈರಲ್ ಫೀವರ್ ಹೆಚ್ಚಾಗಿ ಕಂಡುಬಂದಿದೆ. ಮಕ್ಕಳನ್ನು ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು. ಮಳೆ, ಚಳಿಗೆ ಹೊರಗೆ ಬಿಡದಿರಿ, ಜ್ವರ ಬಂದಲ್ಲಿ ನಿರ್ಲಕ್ಷಿಸುವುದು ಬೇಡ, ವೈದ್ಯರಲ್ಲಿ ತೋರಿಸಿಕೊಳ್ಳಿ.
- ಡಾ.ಮೋಹನ್ ರಾಜಣ್ಣ, ವೈದ್ಯಕೀಯ ಅಧೀಕ್ಷಕರು