ಸಾಲಗಾರರಿಗೆ ಕಿರುಕುಳ ಕೊಟ್ಟರೆ ಕ್ರಿಮಿನಲ್‌ ಕೇಸ್‌ - ಮೈಕ್ರೋಫೈನಾನ್ಸ್‌ಗಳ ವಿರುದ್ಧ ಸುಗ್ರೀವಾಜ್ಞೆ ಅಸ್ತ್ರ

| N/A | Published : Jan 26 2025, 08:02 AM IST

Finance Horoscope 2025
ಸಾಲಗಾರರಿಗೆ ಕಿರುಕುಳ ಕೊಟ್ಟರೆ ಕ್ರಿಮಿನಲ್‌ ಕೇಸ್‌ - ಮೈಕ್ರೋಫೈನಾನ್ಸ್‌ಗಳ ವಿರುದ್ಧ ಸುಗ್ರೀವಾಜ್ಞೆ ಅಸ್ತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲಗಾರರ ಶೋಷಣೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಗೆ ಮೂಗುದಾರ ಹಾಕಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ.

ಬೆಂಗಳೂರು :  ಸಾಲಗಾರರ ಶೋಷಣೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಗೆ ಮೂಗುದಾರ ಹಾಕಲು ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದೆ.

ಸಾಲ ವಸೂಲಿ ನೆಪದಲ್ಲಿ ಸಾಲಗಾರರಿಗೆ ಕಿರುಕುಳ ನೀಡುವುದನ್ನು ತಡೆಯಲು ಹಾಗೂ ಬಲವಂತದ ಸಾಲ ವಸೂಲಿ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅನುವಾಗುವಂತೆ ‘ಕರ್ನಾಟಕ ರಾಜ್ಯ ಮೈಕ್ರೋಫೈನಾನ್ಸ್‌ ಸಂಸ್ಥೆಗಳ ನಿಯಂತ್ರಣ ಕಾಯಿದೆಯನ್ನು’ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು, ಆರ್‌ಬಿಐ ಪ್ರಾದೇಶಿಕ ವಲಯದ ಅಧಿಕಾರಿಗಳು ಹಾಗೂ ನಬಾರ್ಡ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಿಕ ಕಾನೂನು, ಗೃಹ ಹಾಗೂ ಕಂದಾಯ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ ಆಂಧ್ರಪ್ರದೇಶದಲ್ಲಿ 2011ರಲ್ಲಿ ಜಾರಿಗೆ ತಂದಿರುವ ಆಂಧ್ರಪ್ರದೇಶ ಮೈಕ್ರೋಫೈನಾನ್ಸ್‌ ನಿಯಂತ್ರಣ ಕಾಯ್ದೆಯಂತೆ ರಾಜ್ಯದಲ್ಲೂ ಪ್ರಬಲ ಕಾನೂನು ರೂಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಕರಡು ನಿಯಮಾವಳಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದು, ಆಂಧ್ರಪ್ರದೇಶದ ಕಾನೂನು ಅಧ್ಯಯನ ನಡೆಸಿ ಹಣಕಾಸು ಇಲಾಖೆ, ಗೃಹ, ಕಂದಾಯ ಹಾಗೂ ಕಾನೂನು ಇಲಾಖೆಗಳ ಅಧಿಕಾರಿಗಳು ಸೇರಿ ಕಾಯಿದೆ ಅಂತಿಮಗೊಳಿಸಬೇಕು. ಮುಂಬರುವ ಸಚಿವ ಸಂಪುಟ ಸಭೆಯಲ್ಲೇ ಮಂಡಿಸಿ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದಿರುವುದಾಗಿ ಮೂಲಗಳು ತಿಳಿಸಿವೆ.

ಅಲ್ಲದೆ, ತಕ್ಷಣಕ್ಕೆ ಪ್ರತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲು ಸೂಚನೆ ನೀಡಲಾಗಿದೆ. ಸಹಾಯವಾಣಿಗೆ ನೀಡುವ ದೂರುಗಳ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಜತೆಗೆ ಪೊಲೀಸರು ಸಹ ಸ್ವಯಂಪ್ರೇರಿತರಾಗಿ ನಿಗಾ ವಹಿಸಿ ಶೋಷಣೆ ನಿಯಂತ್ರಿಸುವಂತೆ ಸಭೆಯಲ್ಲಿ ಸೂಚಿಸಲಾಗಿದೆ.

ಹೊಸ ಕಾನೂನಿನಲ್ಲಿ ಏನಿರಲಿದೆ?:

ಪ್ರಸ್ತಾವಿತ ಕಾನೂನಿನ ಪ್ರಕಾರ ರಾಜ್ಯದಲ್ಲಿ ವಹಿವಾಟು ನಡೆಸುತ್ತಿರುವ ಪ್ರತಿಯೊಂದು ಮೈಕ್ರೋ ಫೈನಾನ್ಸ್ ಸಂಸ್ಥೆಯೂ ನೋಂದಣಿ ಆಗಿರಬೇಕು. ಕಾನೂನು ಬಾಹಿರವಾಗಿ ಸಾಲ ವಸೂಲಿ ಹೆಸರಿನಲ್ಲಿ ಸಾಲಗಾರರನ್ನು ಶೋಷಣೆ ಮಾಡಬಾರದು. ಮೂರನೇ ವ್ಯಕ್ತಿ ಅಥವಾ ಹೊರಗುತ್ತಿಗೆ ಪಡೆದ ವ್ಯಕ್ತಿ ಮೂಲಕ ಸಾಲ ವಸೂಲಿ ಮಾಡುವಂತಿಲ್ಲ. ಇದನ್ನು ಶಿಕ್ಷಾರ್ಹ ಅಪರಾಧ (ಕಾಗ್ನಿಜೆಬಲ್‌ ಅಫೆನ್ಸ್) ಆಗಿ ಮಾಡಬೇಕು.

ಜತೆಗೆ ಗೂಂಡಾಗಿರಿ ಮಾಡಿ ಸಾಲಗಾರನಿಗೆ ಕಿರುಕುಳ ನೀಡಿದರೆ ಜಾಮೀನುರಹಿತ ಪ್ರಕರಣ ದಾಖಲು ಮಾಡುವುದು ಹಾಗೂ ನೋಂದಣಿ ಇಲ್ಲದೆ ವಹಿವಾಟು ನಡೆಸುವವರಿಗೆ 3 ವರ್ಷದವರೆಗೆ ಶಿಕ್ಷೆ, 1 ಲಕ್ಷ ರು. ದಂಡ ವಿಧಿಸಲು ಆಂಧ್ರಪ್ರದೇಶದ ಕಾನೂನಿನಲ್ಲಿ ಅವಕಾಶವಿದೆ. ಅದನ್ನೇ ರಾಜ್ಯದಲ್ಲೂ ಅನುಷ್ಠಾನಗೊಳಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ ಮೈಕ್ರೋಫೈನಾನ್ಸ್‌ ಸಂಸ್ಥೆಗಳು ಸಾಲ ನೀಡುವಾಗ ಮುಂಗಡವಾಗಿ ಬಡ್ಡಿ ಸಂಗ್ರಹ ಮಾಡುವಂತಿಲ್ಲ. ಆರು ಗಂಟೆ ಬಳಿಕ ವಸೂಲಾತಿಗೆ ಹೋಗುವಂತಿಲ್ಲ. ಬಲವಂತದ ವಸೂಲಿ, ಮನೆಗೆ ಬೀಗ ಹಾಕುವಂತಹ ಕ್ರಮ ಕೈಗೊಳ್ಳುವಂತಿಲ್ಲ. ಜತೆಗೆ ಕಡಿಮೆ ಅವಧಿ ಸಾಲದಲ್ಲಿ ಅಸಲು ಹಣದ ದುಪ್ಪಟ್ಟಿಗಿಂತ ಹೆಚ್ಚು ಸಾಲ ವಸೂಲಿ ಮಾಡುವಂತಿಲ್ಲ. ಒಂದಕ್ಕಿಂತ ಹೆಚ್ಚು ಸ್ವಸಹಾಯ ಗುಂಪುಗಳಲ್ಲಿ ಸದಸ್ಯರಾಗಿರುವವರಿಗೆ ಎರಡು-ಮೂರು ಕಡೆ ಸಾಲ ನೀಡುವಂತಿಲ್ಲ. ಜತೆಗೆ ಒಂದು ಕುಟುಂಬಕ್ಕೆ ಮೂರಕ್ಕಿಂತ ಹೆಚ್ಚು ಸಾಲ ನೀಡುವಂತಿಲ್ಲ ಎಂಬ ಹಲವು ನಿಯಮಗಳನ್ನು ಮಾಡಲು ತೀರ್ಮಾನಿಸಲಾಗಿದೆ.

ಸುಮೊಟೊ ಪ್ರಕರಣ ದಾಖಲಿಸಲು ಅವಕಾಶ:

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಕ್ರೋ ಫೈನಾನ್ಸ್ ಹಾಗೂ ಬಡ್ಡಿ ವ್ಯಾಪಾರಿಗಳಿಂದ ಸಾಲ ಪಡೆಯುವವರ ಹಿತವನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಸಾಲಗಾರರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಅವಕಾಶ ಕಲ್ಪಿಸಲಾಗುವುದು. ಜತೆಗೆ ಈ ಕುರಿತು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಅವಕಾಶ ನೀಡಿ ಆದಷ್ಟು ಬೇಗನೆ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ರಚನೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾನೂನು ಉಲ್ಲಂಘನೆ ಮಾಡದಂತೆ ನಬಾರ್ಡ್‌, ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಇತರೆ ಮನಿ ಲೆಂಡಿಂಗ್‌ ಸಂಸ್ಥೆಗಳಿಗೆ ಸೂಚನೆ ನೀಡಿದ್ದೇವೆ. ಯಾರೇ ಬಲತ್ಕಾರದಿಂದ ಸಾಲ ವಸೂಲಿ ಮಾಡುವುದು. ಗೂಂಡಾಗಳನ್ನು ಬಳಸಿ ಹೆದರಿಸುವುದು. ಅವಮಾನ, ಅಗೌರವ ಉಂಟು ಮಾಡುವುದು ಶಿಕ್ಷಾರ್ಹ ಅಪರಾಧ. ಅಂತಹ ಕಡೆ ಪೊಲೀಸ್‌ನವರು ದೂರು ಪಡೆದು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಶೇ.17.05ಕ್ಕಿಂತ ಹೆಚ್ಚು ಬಡ್ಡಿ ಹಾಕುವಂತಿಲ್ಲ:

ಆರ್‌ಬಿಐ ನಿಯಮಾವಳಿ ಪ್ರಕಾರ ಶೇ. 17.05 ಕ್ಕಿಂತ ಹೆಚ್ಚು ಬಡ್ಡಿ ತೆಗೆದುಕೊಳ್ಳಬಾರದು ಎಂಬ ನಿಯಮವಿದೆ. ಆದರೆ ಕೆಲ ಸಂಸ್ಥೆಗಳು ಶೇ.21 ರಿಂದ ಶೇ.30 ಹಾಗೂ ಕೆಲವು ಕಡೆ ಅದಕ್ಕಿಂತಲೂ ಹೆಚ್ಚು ಬಡ್ಡಿ ಸಂಗ್ರಹಿಸುತ್ತಿವೆ. ಯಾವುದೇ ಕಾರಣಕ್ಕೂ ನಿಯಮಕ್ಕಿಂತಲೂ ಹೆಚ್ಚು ಬಡ್ಡಿ ಹಾಕಬಾರದು. ಈ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಇನ್ನು ಒಂದು ಕುಟುಂಬಕ್ಕೆ ಮೂರು ಸಾಲಕ್ಕಿಂತ ಹೆಚ್ಚು ಸಾಲ ನೀಡಬಾರದು ಎಂಬ ನಿಯಮವಿದೆ. ಆದರೆ ಇವರು ನಾಲ್ಕೈದು ಸಾಲಗಳನ್ನು ನೀಡುತ್ತಾರೆ. ಇದನ್ನೆಲ್ಲಾ ನಿಯಂತ್ರಣ ಮಾಡಬೇಕಿದೆ ಎಂದರು.

ಕೇಂದ್ರಕ್ಕೂ ಒತ್ತಾಯ- ಸಿಎಂ:

ಕೇಂದ್ರ ಸರ್ಕಾರ ಕೂಡ ಈ ಕಿರುಕುಳವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಕರಡು ಕಾನೂನು ಕೇಂದ್ರದ ಮುಂದೆ ಇದ್ದು, ಹಣಕಾಸು ಸಂಸ್ಥೆಗಳ ಶೋಷಣೆಯಿಂದ ಸಾಲಗಾರರು ಊರು ಬಿಡುವುದು, ಆತ್ಮಹತ್ಯೆ ಮಾಡಿಕೊಳ್ಳುವುದು, ಕಿರುಕುಳ ಅನುಭವಿಸುವುದನ್ನು ತಡೆಯಲು ಕೇಂದ್ರ ಸರ್ಕಾರವು ಸಹ ಕಾನೂನು ಮಾಡಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಡಾ.ಜಿ. ಪರಮೇಶ್ವರ್‌, ಎಚ್‌.ಕೆ. ಪಾಟೀಲ್‌, ಕೃಷ್ಣಬೈರೇಗೌಡ ಸೇರಿದಂತೆ ಹಲವರು ಹಾಜರಿದ್ದರು.

ನೋಂದಣಿ ಆಗದ ಸಂಸ್ಥೆಗಳದ್ದೇ ಸಮಸ್ಯೆ: ಸಿಎಂ

ನೋಂದಣಿ ಆಗಿರುವ ಸಂಸ್ಥೆಗಳಿಗಿಂತ ನೋಂದಾಯಿತವಲ್ಲದ ವಹಿವಾಟುದಾರರದ್ದೇ ಹೆಚ್ಚು ಸಮಸ್ಯೆಯಾಗಿದೆ. ಹೀಗಾಗಿ ನೋಂದಣಿ ಆಗದ ಸಂಸಂಸ್ಥೆಗಳನ್ನು ನಿಯಂತ್ರಿಸಬೇಕಾಗಿದೆ. ನೋಂದಣಿ ಅಥವಾ ಪರವಾನಗಿ ಇಲ್ಲದೆ ವಹಿವಾಟು ನಡೆಸುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಈಗಾಗಲೇ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಜೆ 6 ಗಂಟೆ ಬಳಿಕ ಸಾಲ ವಸೂಲಿ ಮಾಡುವುದು, ಬಲವಂತದ ವಸೂಲಿ, ವಸೂಲಿಯನ್ನು ಹೊರಗುತ್ತಿಗೆ ನೀಡುವುದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಈಗಾಗಲೇ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಭೆಯಲ್ಲಿ ಸಾಲಗಾರರ ಶೋಷಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಧರಿಸಲಾಗಿದೆ. ಬಲವಂತದ ವಸೂಲಿಗಾರರು ಕಂಡು ಬಂದರೆ ಸಂಜೆ ಅಷ್ಟೊತ್ತಿಗೆ ಒಳಗೆ ಹಾಕಿ ಎಂದು ಹೇಳಿದ್ದೇವೆ.

- ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

- ಸಾಲ ಪಡೆದವರ ಸಂಖ್ಯೆ - 1.09 ಕೋಟಿ

- ಸಾಲ ಬಾಕಿ ಮೊತ್ತ - 59,367 ಕೋಟಿ ರು.