ಸಾರಾಂಶ
ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ನಿಯುಕ್ತಿಗೊಂಡಿರುವ ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರಿಗೆ ಜಿಲ್ಲಾಡಳಿತ ವತಿಯಿಂದ ಗುರುವಾರ ಅಧಿಕೃತ ಆಹ್ವಾನ ನೀಡಲಾಯಿತು.
ಮೈಸೂರು : ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ನಿಯುಕ್ತಿಗೊಂಡಿರುವ ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರಿಗೆ ಜಿಲ್ಲಾಡಳಿತ ವತಿಯಿಂದ ಗುರುವಾರ ಅಧಿಕೃತ ಆಹ್ವಾನ ನೀಡಲಾಯಿತು.
ಹಂಪನಾ ಅವರ ಬೆಂಗಳೂರಿನ ಕ್ರಸೆಂಟ್ ರಸ್ತೆಯ ಅಮೇರಿಕನ್ ಕಾಲೋನಿಯಲ್ಲಿರುವ ನಿವಾಸಕ್ಕೆ ತೆರಳಿದ ಜಿಲ್ಲಾಡಳಿತದ ಅಧಿಕಾರಿಗಳು, ಮೈಸೂರು ಪೇಟ ತೋಡಿಸಿ, ಫಲಫುಷ್ಪದೊಂದಿಗೆ ಆಮಂತ್ರಣ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜ್, ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಮತ್ತು ಸ್ವಾಗತ ಸಮಿತಿಯ ಅಧಿಕಾರಿಗಳು ಇದ್ದರು.
ರಾಜ್ಯಪಾಲರಿಗೆ ಸ್ವಾಗತ:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ರ ಉದ್ಘಾಟನೆ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರಿಗೆ ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಆಹ್ವಾನ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳು ರಾಜಭವನಕ್ಕೆ ತೆರಳಿ ಗೆಹ್ಲೋಟ್ ಅವರಿಗೆ ಅಧಿಕೃತ ಆಹ್ವಾನ ನೀಡಿದರು.
ಸಿಎಂಗೆ ಆಹ್ವಾನ:
ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಗುರುವಾರ ಆಹ್ವಾನ ನೀಡಿದರು.
ಅಂತೆಯೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಆಹ್ವಾನ ನೀಡಲಾಯಿತು. ಬಳಿಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಸ್ವಾಗತ ಕೋರಲಾಯಿತು.
ಕೆ.ಆರ್.ನಗರ ಶಾಸಕ ಡಿ. ರವಿಶಂಕರ್, ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ, ಸಿ.ಎನ್. ಮಂಜೇಗೌಡ, ಡಾ.ಡಿ. ತಿಮ್ಮಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಹಾಗೂ ಸ್ವಾಗತ ಸಮಿತಿ ಅಧಿಕಾರಿಗಳು ಇದ್ದರು.
ಇಂದಿನಿಂದ ಮೂರು ದಿನ ಮೈಸೂರಿನಲ್ಲೇ ಇರುವ ಸಿಎಂ ಸಿದ್ದರಾಮಯ್ಯ
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.27 ರಿಂದ 29 ರವರೆಗೆ ಮೈಸೂರಿನಲ್ಲಿಯೇ ಇದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಬೆಳಗ್ಗೆ 10.25ಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸುವ ಅವರು, 10.45ಕ್ಕೆ ಅರಮನೆ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಭಾಗವಹಿಸುವರು. 11.30ಕ್ಕೆ ಜಿಪಂನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವರು.
28 ರಂದು ಬೆಳಗ್ಗೆ 10ಕ್ಕೆ ಸಿದ್ದಾರ್ಥನಗರದಲ್ಲಿ ಮೈಸೂರು ರೇಡಿಯನ್ಸ್ ಹೋಟೆಲ್ ಉದ್ಘಾಟಿಸುವರು. 11ಕ್ಕೆ ಮಾನಸ ಗಂಗೋತ್ರಿ ಸೆನೆಟ್ ಭವನದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆಗಿನ ಕೃತಿ ಬಿಡುಗಡೆ ಮಾಡುವರು. ಮಧ್ಯಾಹ್ನ 3ಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಶತಮಾನೋತ್ಸವ ಸಮಾರೋಪ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವರು. 29 ರಂದು ಬೆಳಗ್ಗೆ 11ಕ್ಕೆ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಹಳೇ ವಿದ್ಯಾರ್ಥಿಗಳ ಸಂಘ ಉದ್ಘಾಟಿಸುವರು. ಸಂಜೆ 4ಕ್ಕೆ ಅಶೋಕಪುರಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಸಂಜೆ 6ಕ್ಕೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳುವರು.