ರಾಜಧಾನಿಯಲ್ಲಿ ‘ಇ-ಸಿಮ್’ ಬಳಸಿ ‘ಅಗೋಚರ’ವಾಗಿ ಕುಳಿತು ದೇಶಾದ್ಯಂತ ಡಿಜಿಟಲ್ ಅರೆಸ್ಟ್ ಹಾಗೂ ಸೆಕ್ಸ್‌ ಹೆಸರಿನಲ್ಲಿ ಸುಲಿಗೆ ಕೃತ್ಯಗಳನ್ನು ಎಸಗುತ್ತಿದ್ದ ಸೈಬರ್ ವಂಚಕರ ಜಾಲವೊಂದನ್ನು ತಿಂಗಳುಗಳ ಕಾಲ ತನಿಖೆ ಮಾಡಿ ಸೈಬರ್ ಕಮಾಂಡ್‌ ಘಟಕ ಪತ್ತೆ ಹಚ್ಚಿದೆ.

ಬೆಂಗಳೂರು : ರಾಜಧಾನಿಯಲ್ಲಿ ‘ಇ-ಸಿಮ್’ ಬಳಸಿ ‘ಅಗೋಚರ’ವಾಗಿ ಕುಳಿತು ದೇಶಾದ್ಯಂತ ಡಿಜಿಟಲ್ ಅರೆಸ್ಟ್ ಹಾಗೂ ಸೆಕ್ಸ್‌ ಹೆಸರಿನಲ್ಲಿ ಸುಲಿಗೆ ಕೃತ್ಯಗಳನ್ನು ಎಸಗುತ್ತಿದ್ದ ಸೈಬರ್ ವಂಚಕರ ಜಾಲವೊಂದನ್ನು ತಿಂಗಳುಗಳ ಕಾಲ ತನಿಖೆ ಮಾಡಿ ಸೈಬರ್ ಕಮಾಂಡ್‌ ಘಟಕ ಪತ್ತೆ ಹಚ್ಚಿದೆ.

ಇದೇ ಮೊದಲ ಬಾರಿ ಬೃಹತ್ ಪ್ರಮಾಣದ ಇ-ಸಿಮ್ ವಂಚನೆ ಜಾಲ ಪತ್ತೆಯಾಗಿದ್ದು, ತಮಿಳುನಾಡಿನ ತಿರುಚ್ಚಿಯಲ್ಲಿ ಈ ಜಾಲದ ಪ್ರಮುಖ ಆರೋಪಿಯನ್ನು ಸೈಬರ್ ಕ್ರೈಂ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಸಿಮ್ ಮಾರಾಟ ಪ್ರಕರಣದಲ್ಲಿ ಮಹಾರಾಷ್ಟ್ರದ ನಿರಂಜನ್ ಮಟ್ಕರ್, ಯಶ್ ಪಾಟೀಲ್ ಹಾಗೂ ಇಬ್ಬರು ಅಪ್ರಾಪ್ತರನ್ನು ವೈಟ್ ‍ಫೀಲ್ಡ್ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದರು. ಈ ಆರೋಪಿಗಳ ಸಂಪರ್ಕ ಜಾಲಾಡಿದಾಗ ಡಿಜಿಟಲ್ ಅರೆಸ್ಟ್ ಹಾಗೂ ಸೆಕ್ಸ್ ಹೆಸರಿನಲ್ಲಿ ಸುಲಿಗೆ ಕೃತ್ಯಗಳಲ್ಲೂ ಪಾತ್ರ ಪತ್ತೆಯಾಗಿದೆ. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಕಾಡುಗೋಡಿ ಹಾಗೂ ಪಟ್ಟಂದೂರು ಅಗ್ರಹಾರದ ಮನೆಯಲ್ಲಿ ಇ-ಸಿಮ್ ನಿರ್ವಹಣಾ ಘಟಕಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

320 ಸಿಮ್‌ಗಳ ಸಂಪರ್ಕ?:

ಕಾಡುಗೋಡಿ ಹಾಗೂ ಪಟ್ಟಂದೂರು ವ್ಯಾಪ್ತಿಯಲ್ಲಿ ಸಿಮ್ ಬಾಕ್ಸ್ ಸಾಧನಗಳಲ್ಲಿ ತಮ್ಮ ಕಂಪನಿಯ ಸಿಮ್ ಕಾರ್ಡ್‌ಗಳು ಅಕ್ರಮವಾಗಿ ಬಳಕೆಯಾಗುತ್ತಿವೆ ಎಂದು ವೈಟ್‌ಫೀಲ್ಡ್‌ ಸೈಬರ್ ಠಾಣೆಗೆ ಭಾರ್ತಿ ಏರ್‌ಟೆಲ್‌ ಲಿಮಿಟೆಡ್‌ನ ಮುಖ್ಯ ನೋಡಲ್ ಅಧಿಕಾರಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಕಾಡುಗೋಡಿ ಹಾಗೂ ಪಟ್ಟಂದೂರು ಅಗ್ರಹಾರ ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರತ್ಯೇಕವಾಗಿ ಎರಡು ಫ್ಲ್ಯಾಟ್‌ಗಳಲ್ಲಿ ಸಿಮ್ ಬಾಕ್ಸ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂತು ಎಂದು ಸೈಬರ್ ಕಮಾಂಡ್ ಘಟಕದ ಡಿಜಿಪಿ ಪ್ರಣವ್‌ ಮೊಹಂತಿ ತಿಳಿಸಿದ್ದಾರೆ.

ಈ ಕೇಂದ್ರಗಳ ಮೇಲೆ ದೂರಸಂಪರ್ಕ ಇಲಾಖೆ ಸಹಕಾರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು 10 ಸಿಮ್ ಬಾಕ್ಸ್ (ಜಿಎಸ್‌ಎಂ ಗೇಟ್‌ವೇ) ಸಾಧನ ವಶಪಡಿಸಿಕೊಳ್ಳಲಾಯಿತು. ಕಾಡುಗೋಡಿಯಲ್ಲಿ ತಲಾ 32 ಸಿಮ್ ಸ್ಲಾಟ್‌ಗಳಿರುವ ಆರು ಸಿಮ್ ಬಾಕ್ಸ್ ಸಾಧನಗಳಿದ್ದವು. ಇಲ್ಲಿ ಒಟ್ಟು 192 ಸಿಮ್ ಸ್ಲಾಟ್‌ಗಳಲ್ಲಿ ವಿವಿಧ ದೂರಸಂಪರ್ಕ ಸೇವಾಧಾರಿತ ಇ-ಸಿಮ್ ಆಧಾರಿತ ಸಂಪರ್ಕಗಳನ್ನು ಅಳವಡಿಸಲಾಗಿತ್ತು. ಅದೇ ರೀತಿ ಪಟ್ಟಂದೂರು ಅಗ್ರಹಾರ ಫ್ಲ್ಯಾಟ್‌ನಲ್ಲಿ ತಲಾ 32 ಸಿಮ್ ಸ್ಲಾಟ್‌ಗಳಿರುವ ನಾಲ್ಕು ಸಿಮ್ ಬಾಕ್ಸ್ ಸಾಧನಗಳು ಸೇರಿ ಒಟ್ಟು 128 ಸಿಮ್ ಸ್ಲಾಟ್‌ಗಳು ಸಿಕ್ಕಿವೆ. ಎರಡು ಕೇಂದ್ರಗಳಲ್ಲಿ ಒಟ್ಟಾಗಿ 320 ಸಿಮ್ ಸಂಪರ್ಕಗಳ ಸಾಮರ್ಥ್ಯ ಹೊಂದಿದ್ದವು ಎಂದು ಡಿಜಿಪಿ ವಿವರಿಸಿದ್ದಾರೆ.

ಏನಿದು ಸಿಮ್‌ ಬಾಕ್ಸ್‌:

ಹಲವಾರು ಸಿಮ್‌ಗಳನ್ನು ಹೊಂದಿದ ಒಂದು ಉಪಕರಣ. ಅಂತಾರಾಷ್ಟ್ರೀಯ ಕರೆಗಳನ್ನು ಲೋಕಲ್‌ ಕರೆ ಎಂದು ಪರಿವರ್ತಿಸಲು ಇದನ್ನು ಬಳಸಲಾಗುತ್ತಿತ್ತು.

ಕ್ಲೌಡ್‌ ಮೂಲಕ ನಿರ್ವಹಣೆ?:

ಕೆಲ ತಿಂಗಳ ಹಿಂದೆ ಈ ಎರಡು ಫ್ಲ್ಯಾಟ್‌ಗಳನ್ನು ಬಾಡಿಗೆ ಪಡೆದು ಸಿಮ್ ಬಾಕ್ಸ್‌ಗಳನ್ನು ನಿರ್ವಹಿಸುವ ಕೇಂದ್ರಗಳನ್ನು ತಮಿಳುನಾಡು ಮೂಲದ ವ್ಯಕ್ತಿ ಸ್ಥಾಪಿಸಿದ್ದ. ಈ ಎರಡು ಘಟಕಗಳು ವ್ಯಕ್ತಿಗತವಾಗಿ ನಿರ್ವಹಣೆ ಇಲ್ಲದೆ ತಾಂತ್ರಿಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದವು. ಸಿಮ್‌ ಸಾಧನಗಳನ್ನು ಕ್ಲೌಡ್‌ಗೆ ಸಂಪರ್ಕ ಕಲ್ಪಿಸಿ ಅಜ್ಞಾತ ಸ್ಥಳದಿಂದ ಕೂತು ರಿಮೋಟ್ ಕಂಟ್ರೋಲ್ ಮೂಲಕ ಅವುಗಳನ್ನು ಆರೋಪಿಗಳು ನಿರ್ವಹಿಸುತ್ತಿದ್ದರು. ಇದಕ್ಕೆ ಇಸ್ರೇಲ್ ದೇಶದ ಅತ್ಯಾಧುನಿಕ ಸಾಧನಗಳನ್ನು ವಂಚಕರು ಬಳಸಿದ್ದರು. ಆ ಫ್ಲ್ಯಾಟ್‌ಗಳಲ್ಲಿ ಬಾಗಿಲು, ದೀಪಗಳು ಹಾಗೂ ಸಾಧನಗಳನ್ನು ಹೀಗೆ ಪ್ರತಿಯೊಂದು ವೈಫೈ ಮೂಲಕವೇ ಆರೋಪಿಗಳು ನಿಯಂತ್ರಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಂಕೆ ಬಂದಿದ್ದು ಹೇಗೆ?:

ಕೆಲ ತಿಂಗಳಿಂದ ವೈಟ್‌ಫೀಲ್ಡ್ ವ್ಯಾಪ್ತಿಯಲ್ಲಿ ಡಿಜಿಟಲ್ ಅರೆಸ್ಟ್ ಹಾಗೂ ಸೆಕ್ಸ್ ಹೆಸರಿನ ಸುಲಿಗೆ ಕೃತ್ಯಗಳಲ್ಲಿ ಬಳಕೆಯಾಗಿದ್ದ ಸಿಮ್‌ಗಳು ಆಕ್ಟಿವ್ ಆಗಿವೆ ಎಂಬ ಸಂಗತಿ ತನಿಖೆಯಲ್ಲಿ ಗೊತ್ತಾಗಿತ್ತು. ಆದರೆ ಆ ಸಿಮ್‌ಗಳು ಕ್ಷಣ ಕ್ಷಣಕ್ಕೂ ಲೊಕೇಷನ್ ಬದಲಾಯಿಸುತ್ತಿದ್ದವು. ಹೀಗಾಗಿ ನಿಖರವಾಗಿ ಅವುಗಳು ಯಾವ ಟವರ್‌ನಲ್ಲಿ ಸಂಪರ್ಕ ಹೊಂದಿವೆ ಎಂಬುದು ಖಚಿತವಾಗುತ್ತಿರಲಿಲ್ಲ. ಕೊನೆಗೆ ಆ ಎರಡು ಫ್ಲ್ಯಾಟ್‌ಗಳನ್ನು ಪತ್ತೆ ಹಚ್ಚಿ ಸೈಬರ್ ಕ್ರೈಂ ಪೊಲೀಸರ ತಂಡ ತೆರಳಿತು. ಆದರೆ ಬಾಗಿಲು ಬಂದ್ ಆಗಿದ್ದರಿಂದ ಬರಿಗೈಯಲ್ಲಿ ಮರಳಿದ್ದರು. ಹೀಗಾಗಿ ಅಗೋಚರವಾಗಿಯೇ ಸಿಮ್‌ ಬಾಕ್ಸ್‌ಗಳನ್ನು ಆರೋಪಿಗಳು ನಿರ್ವಹಿಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಪತ್ತೆಗೆ ಅತ್ಯಾಧುನಿಕ ಸಾಧನ ಖರೀದಿ:

ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್‌ಗಳ ಸಿಮ್‌ಗಳು ನಿರ್ವಹಣೆಯಾಗುತ್ತಿವೆ ಎಂದು ಸೈಬರ್ ಅಧಿಕಾರಿಗಳಿಗೆ ಕೇಂದ್ರ ಗುಪ್ತ ದಳ ಮಾಹಿತಿ ನೀಡಿತ್ತು. ಅಲ್ಲದೆ ದೆಹಲಿಯಿಂದ ತಾವೇ ಖುದ್ದು ಅತ್ಯಾಧುನಿಕ ಸಾಧನವನ್ನು ಖರೀದಿಸಿ ತಂದ ಐಬಿ ಅಧಿಕಾರಿಗಳು, ಸೈಬರ್ ಪೊಲೀಸರ ಜತೆ ಆ ಸಾಧನ ಬಳಸಿ ಜಂಟಿ ಕಾರ್ಯಾಚರಣೆಗಿಳಿದರು. ಕೊನೆಗೆ ಕರೆಗಳನ್ನು ವಿಶ್ಲೇಷಿಸಿ ಆ ಎರಡು ಕೇಂದ್ರಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಸಿಮ್‌ಗಳ ಪರಿವರ್ತನೆ:

ಸೈಬರ್ ವಂಚನೆ ಜಾಲ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿದೆ. ಈ ಜಾಲಕ್ಕೆ ಸಿಮ್‌ಗಳನ್ನು ಮಹಾರಾಷ್ಟ್ರದ ನಿರಂಜನ್‌, ಯಶ್ ಹಾಗೂ ಅಪ್ರಾಪ್ತರು ಪೂರೈಸಿದ್ದರು. ಬಳಿಕ ಆ ಸಿಮ್‌ಗಳನ್ನು ಇ-ಸಿಮ್‌ಗಳಾಗಿ ಪರಿವರ್ತಿಸಿ ತಮಿಳುನಾಡಿನ ವ್ಯಕ್ತಿ ನಿರ್ವಹಿಸುತ್ತಿದ್ದ. ಈ ಜಾಲದ ಮಾಸ್ಟರ್‌ ಮೈಂಡ್ ವಿದೇಶದಲ್ಲಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಈ ಮೋಸದ ಜಾಲದಲ್ಲಿ ಬೃಹತ್ ಆರ್ಥಿಕ ವಹಿವಾಟು ನಡೆದಿರುವ ಸಾಧ್ಯತೆ ಕಂಡು ಬಂದಿದೆ. ಈ ಜಾಲವು ಡಿಜಿಟಲ್ ಅರೆಸ್ಟ್, ಸೆಕ್ಸ್‌ಟಾರ್ಷನ್ ಹಾಗೂ ಆರ್ಥಿಕ ಸೈಬರ್ ವಂಚನೆ ಚಟುವಟಿಕೆಗಳಲ್ಲಿ ಪಾತ್ರದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.

-ಪ್ರಣವ್‌ ಮೊಹಂತಿ

ಡಿಜಿಪಿ, ಸೈಬರ್ ಕಮಾಂಡ್ ಘಟಕ ಹಾಗೂ ಸಿಐಡಿ