ಎಸ್ಸೆಸ್ಸೆಲ್ಸಿ ವಿಶೇಷ ತರಗತಿ ನಡೆಸುವ ಶಿಕ್ಷಕರಿಗೆ ಗಳಿಕೆ ರಜೆ

| Published : May 16 2024, 09:50 AM IST / Updated: May 16 2024, 09:51 AM IST

teacher .jpg
ಎಸ್ಸೆಸ್ಸೆಲ್ಸಿ ವಿಶೇಷ ತರಗತಿ ನಡೆಸುವ ಶಿಕ್ಷಕರಿಗೆ ಗಳಿಕೆ ರಜೆ
Share this Article
  • FB
  • TW
  • Linkdin
  • Email

ಸಾರಾಂಶ

ಜೂನ್‌ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ‘ಪರೀಕ್ಷೆ -2’ಗೆ ನೋಂದಾಯಿಸುವ ವಿದ್ಯಾರ್ಥಿಗಳಿಗೆ ನಿಗದಿಯಂತೆ ಮೇ 15 ರಿಂದ ಜೂನ್‌ 5 ರವರೆಗೆ ವಿಶೇಷ ತರಗತಿಗಳನ್ನು ನಡೆಸುವ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಕಡಿತವಾಗುವ ಬೇಸಿಗೆ ರಜಾದಿನಗಳಿಗೆ ಪರ್ಯಾಯವಾಗಿ ಗಳಿಕೆ ರಜೆ ಪಡೆಯಲು ಸರ್ಕಾರ ಅವಕಾಶ ನೀಡಿದೆ.

ಬೆಂಗಳೂರು :  ಜೂನ್‌ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ‘ಪರೀಕ್ಷೆ -2’ಗೆ ನೋಂದಾಯಿಸುವ ವಿದ್ಯಾರ್ಥಿಗಳಿಗೆ ನಿಗದಿಯಂತೆ ಮೇ 15 ರಿಂದ ಜೂನ್‌ 5 ರವರೆಗೆ ವಿಶೇಷ ತರಗತಿಗಳನ್ನು ನಡೆಸುವ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಕಡಿತವಾಗುವ ಬೇಸಿಗೆ ರಜಾದಿನಗಳಿಗೆ ಪರ್ಯಾಯವಾಗಿ ಗಳಿಕೆ ರಜೆ ಪಡೆಯಲು ಸರ್ಕಾರ ಅವಕಾಶ ನೀಡಿದೆ.

ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಫೇಲಾಗಿರುವ ವಿದ್ಯಾರ್ಥಿಗಳಿಗೂ ಇದೇ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಆಯಾ ಆಡಳಿತ ಮಂಡಳಿಗಳೇ ಅಗತ್ಯ ಕ್ರಮ ವಹಿಸಬೇಕೆಂದು ಇಲಾಖೆ ಸೂಚಿಸಿದೆ.

ತನ್ಮೂಲಕ 14 ದಿನ ಬೇಸಿಗೆ ರಜಾದಿನಗಳು ಕಡಿತಗೊಳ್ಳುವ ಹಿನ್ನೆಲೆಯಲ್ಲಿ ವಿಶೇಷ ತರಗತಿ ನಡೆಸಲು ವಿರೋಧ ವ್ಯಕ್ತಪಡಿಸಿದ್ದ ಶಿಕ್ಷಕರ ಮನವೊಲಿಸಲು ಸರ್ಕಾರ ಪ್ರಯತ್ನ ಮಾಡಿದಂತಾಗಿದೆ.

ಷರತ್ತುಗಳು:  ಯಾವುದಾದರೂ ಶಾಲೆಯಲ್ಲಿ ಒಟ್ಟಾರೆ ಅನುತ್ತೀರ್ಣ ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ 10ಕ್ಕಿಂತ ಕಡಿಮೆ ಇದ್ದರೆ ಸಮೀಪದ ಶಾಲೆಯಲ್ಲಿ ನಡೆಯುವ ವಿಶೇಷ ತರಗತಿಗೆ ವರ್ಗಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಯಾವುದೇ ಶಾಲೆಯಲ್ಲಿ ಒಂದೇ ವಿಷಯದಲ್ಲಿ ಕನಿಷ್ಠ 10 ಮಕ್ಕಳು ಅನುತ್ತೀರ್ಣರಾಗಿದ್ದಲ್ಲಿ ಅದೇ ಶಾಲೆಯ ಸಂಬಂಧಿಸಿದ ವಿಷಯ ಶಿಕ್ಷಕರಿಂದಲೇ ವಿಶೇಷ ತರಗತಿ ನಡೆಸಬೇಕೆಂದು ಷರತ್ತು ವಿಧಿಸಿದೆ.

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌ ಅವರ ಆದೇಶದ ಮೇರೆಗೆ ಬುಧವಾರ ಸುತ್ತೋಲೆ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆಯ ಪ್ರೌಢ ಶಾಲಾ ನಿರ್ದೇಶಕರು, ಪರೀಕ್ಷೆ 1ರಲ್ಲಿ ಫೇಲಾಗಿರುವ ಎಲ್ಲ ಮಕ್ಕಳೂ ಪರೀಕ್ಷೆ 2ಗೆ ನೋಂದಾಯಿಸುವಂತೆ ಆಯಾ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಕ್ರಮ ವಹಿಸಬೇಕು. ಜೊತೆಗೆ ಸಿ ಮತ್ತು ಸಿ+ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಪರೀಕ್ಷೆಗೆ 2ಗೆ ನೋಂದಾಯಿಸಲು ಉತ್ತೇಜಿಸಬೇಕು. ಯಾವುದಾದರೂ ಅನುತ್ತೀರ್ಣ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಓದಿದ್ದು ಈಗ ತಮ್ಮ ಸ್ವಗ್ರಾಮದಲ್ಲಿ ಇದ್ದರೆ ಆ ಗ್ರಾಮದ ಅಥವಾ ಸಮೀಪದ ಶಾಲೆಯಲ್ಲೇ ವಿಶೇಷ ತರಗತಿಗೆ ಹಾಜರಾಗಲು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದ್ದಾರೆ.

ವಿಶೇಷ ತರಗತಿಗಳಿಗೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರೇ ವೇಳಾಪಟ್ಟಿ ಸಿದ್ಧಪಡಿಸಬೇಕು. ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಕಲ್ಪಿಸಬೇಕು. ಯಾವುದೇ ಶಾಲೆಯಲ್ಲಿ ವಿಷಯ ಶಿಕ್ಷಕರು ಇಲ್ಲದಿದ್ದರೆ ತಾಲ್ಲೂಕಿನ ಇತರೆ ಸಮೀಪದ ಶಾಲೆಯಿಂದ ಶಿಕ್ಷಕರನ್ನು ನಿಯೋಜಿಸಬಹುದು. ಇಡೀ ತಾಲ್ಲೂಕಲ್ಲಿ ವಿಷಯ ಶಿಕ್ಷಕರು ಇಲ್ಲದಿದ್ದರೆ ಅತಿಥಿ ಶಿಕ್ಷಕರನ್ನು ಬಿಇಒ ನೇಮಿಸಬೇಕು ಎಂಬುದು ಸೇರಿದಂತೆ ಒಟ್ಟು 18 ಅಂಶಗಳ ವಿವರವಾದ ಸುತ್ತೋಲೆ ಹೊರಡಿಸಲಾಗಿದೆ.