ಎಐ ಸಿಗ್ನಲ್‌ಗಳಿಂದ ಸಂಚಾರ ಸುಲಭ : 136 ಜಂಕ್ಷನ್‌ಗಳಲ್ಲಿ ಎಐ ಕ್ಯಾಮೆರಾ - ದಯಾನಂದ್‌

| Published : Oct 11 2024, 12:12 PM IST / Updated: Oct 11 2024, 12:13 PM IST

B Dayananda

ಸಾರಾಂಶ

ಆರು ತಿಂಗಳ ಹಿಂದೆ ರಾಜಧಾನಿಯಲ್ಲಿ ಸಂಚಾರ ನಿರ್ವಹಣೆಗೆ ಸಂಚಾರ ಪೊಲೀಸರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಜಾರಿಗೊಳಿಸಿದ್ದ ನಿಖರ ಸಮಯ ಆಧಾರಿತ ‘ಬೆಂಗಳೂರು ಆಡಾಪ್ಟಿವ್‌ ಟ್ರಾಫಿಕ್ ಸಿಗ್ನಲ್‌ ಕಂಟ್ರೋಲ್ ಸಿಸ್ಟಂ’ (ಬಿಎಟಿಸಿಎಸ್‌) ವ್ಯವಸ್ಥೆ ಸಫಲಗೊಂಡಿದೆ.

ಬೆಂಗಳೂರು  : ಆರು ತಿಂಗಳ ಹಿಂದೆ ರಾಜಧಾನಿಯಲ್ಲಿ ಸಂಚಾರ ನಿರ್ವಹಣೆಗೆ ಸಂಚಾರ ಪೊಲೀಸರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ಜಾರಿಗೊಳಿಸಿದ್ದ ನಿಖರ ಸಮಯ ಆಧಾರಿತ ‘ಬೆಂಗಳೂರು ಆಡಾಪ್ಟಿವ್‌ ಟ್ರಾಫಿಕ್ ಸಿಗ್ನಲ್‌ ಕಂಟ್ರೋಲ್ ಸಿಸ್ಟಂ’ (ಬಿಎಟಿಸಿಎಸ್‌) ವ್ಯವಸ್ಥೆ ಸಫಲಗೊಂಡಿದೆ. ಸಂಚಾರ ಸಮಸ್ಯೆ ಪರಿಹರಿಸಲು ಪೊಲೀಸರಿಗೆ ಎಐ ನೆರವಾಗಿದೆ.

ಈ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತ ಬಿ.ದಯಾನಂದ್‌, ಹೊಸ ವ್ಯವಸ್ಥೆ ಮೂಲಕ ಸಂಚಾರ ಸಮಸ್ಯೆಯನ್ನು ಪರಿಹರಿಸಲು ಯತ್ನಿಸಲಾಗುತ್ತಿದೆ ಎಂದರು.

ನಗರದಲ್ಲಿ ನಿಖರ ಸಮಯ ಆಧಾರಿತ ಬಿಎಟಿಎಸ್‌ ಮೂಲಕ ಸಂಚಾರ ನಿರ್ವಹಣೆಯನ್ನು ವಿನೂತನ ರೀತಿಯಲ್ಲಿ ನಿಯಂತ್ರಿಸಲಾಗುತ್ತಿದೆ. ಕಳೆದೊಂದು ದಶಕದಿಂದ ನಗರವು ಸಂಚಾರ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ಬಿಎಟಿಸಿಎಸ್‌ ಜಾರಿಗೊಳಿಸಲಾಗಿದ್ದು, ಸಂಚಾರದ ದಟ್ಟಣೆ ತಗ್ಗಿಸಲು ಹಾಗೂ ಪ್ರಯಾಣದ ಸಮಯ ಉಳಿಸಲು ಈ ಅತ್ಯಾಧುನಿಕ ತಂತ್ರಜ್ಞಾನ ನೆರವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

 136 ಜಂಕ್ಷನ್‌ಗಳಲ್ಲಿ ಎಐ ಕ್ಯಾಮೆರಾ: 

ನಗರದಲ್ಲಿ 435 ಜಂಕ್ಷನ್‌ಗಳಿವೆ. ಇದೇ ವರ್ಷದ ಮೇ ತಿಂಗಳಿಂದ ಪ್ರಾರಂಭವಾದ ಬಿಎಟಿಸಿಎಸ್ ಯೋಜನೆಯಡಿ 136 ಜಂಕ್ಷನ್‌ಗಳನ್ನು ಎಐ ಕ್ಯಾಮೆರಾಗಳಿಂದ ನವೀಕರಿಸಲಾಗಿದ್ದು, 29 ಜಂಕ್ಷನ್‌ಗಳನ್ನು ಹೊಸದಾಗಿ ಸ್ಥಾಪಿಸಲಾಗಿದೆ. ಒಟ್ಟು 165 ಟ್ರಾಫಿಕ್‌ ಸಿಗ್ನಲ್‌ಗಳನ್ನು ಒಳಗೊಂಡಿದೆ. ಈ ಯೋಜನೆಗೆ ಸಿಡಿಎಸಿ ಸಂಸ್ಥೆಯಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆ್ಯಪ್‌ಗಳನ್ನು ಬಳಸಿಕೊಳ್ಳುಲಾಗುತ್ತಿದೆ ಎಂದು ಜಂಟಿ ಆಯುಕ್ತ (ಸಂಚಾರ) ಎಂ.ಎನ್‌.ಅನುಚೇತ್ ಹೇಳಿದರು.

 ಎಲ್ಲೆಲ್ಲಿ ಜಾರಿ: 

ಮೊದಲ ಹಂತದಲ್ಲಿ ಬಿಎಟಿಸಿಎಸ್ ಯೋಜನೆಯನ್ನು ಬಸವನಗುಡಿ, ಜಯನಗರ, ಜೆಪಿ ನಗರ ಮತ್ತು ಹಡ್ಸನ್‌ ಸರ್ಕಲ್‌ ಸೇರಿದಂತೆ ನಗರದ ಪ್ರಮುಖ 60 ಜಂಕ್ಷನ್‌ಗಳಲ್ಲಿ ಜಾರಿಗೊಳಿಸಲಾಯಿತು. ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಹಾಗೂ ಪ್ರಯಾಣದ ಸಮಯ ಇಳಿಕೆ ಆಗಿರುವುದು ದತ್ತಾಂಶಗಳ ವಿಶ್ಲೇಷಣೆಯಿಂದ ಖಚಿತವಾಗಿದೆ. ಇನ್ನುಳಿದ ಜಂಕ್ಷನ್‌ಗಳು 2025ರ ಜನವರಿ ತಿಂಗಳಿನೊಳಗೆ ನವೀಕರಣಗೊಳ್ಳಲಿವೆ ಎಂದು ಅನುಚೇತ್ ಹೇಳಿದರು.

ಬಿಟಿಸಿಎಸ್‌ ಯೋಜನೆಯು ಹೈದರಾಬಾದ್ ಸೇರಿದಂತೆ ಭಾರತದ 30ಕ್ಕೂ ಹೆಚ್ಚು ನಗರಗಳಲ್ಲಿ ಯಶಸ್ವಿಯಾಗಿ ಕಾರ್ಯಗತಗೊಂಡಿದ್ದು, ಮೆಟ್ರೋಪಾಲಿಟನ್ ಪರಿಸರದಲ್ಲಿ ಶೇ.15ಕ್ಕಿಂತ ಹೆಚ್ಚು ಸಂಚಾರ ದಟ್ಟಣೆಯ ಕಡಿತ ಸಾಧಿಸಿದೆ ಎಂದು ತಿಳಿಸಿದರು.

 ಹೊರ ವಲಯಕ್ಕೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳ ಸ್ಥಳಾಂತರ? 

ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸಂಚರಿಸುವ ಬಸ್‌ಗಳ ನಿಲ್ದಾಣವನ್ನು ನಗರದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಸಂಚಾರ ವಿಭಾಗದ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಹೊಸೂರು, ಮೈಸೂರು, ತುಮಕೂರು, ಬಳ್ಳಾರಿ ಹಾಗೂ ಹೊಸಕೋಟೆ ರಸ್ತೆಗಳಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳನ್ನು ನಗರದಿಂದ ಹೊರಕ್ಕೆ ಸ್ಥಳಾಂತರಿಸಬೇಕು. ಆಗ ಈ ಐದು ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇಳಿಕೆ ಆಗಲಿದ್ದು, ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರಾಂತ್ಯ ಹಾಗೂ ವಿಶೇಷ ರಜೆ ದಿನಗಳ ವೇಳೆ ನಗರದಿಂದ ಹೊರಕ್ಕೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಆಗ ಸಂಚಾರ ದಟ್ಟಣೆಗೂ ಕಾರಣ‍ವಾಗುತ್ತದೆ. ತುಮಕೂರು ರಸ್ತೆಯಲ್ಲಿ ಗೋವರ್ಧನ ಚಿತ್ರಮಂದಿರ ಮುಂಭಾಗ ಖಾಸಗಿ ಬಸ್‌ಗಳ ನಿಲುಗಡೆ ಪರಿಣಾಮ ಆ ಪ್ರದೇಶದ ಟ್ರಾಫಿಕ್ ಹೆಚ್ಚಾಗಿದೆ. ಅದೇ ರೀತಿ ಸ್ಯಾಟಲೈಟ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲ್ದಾಣದಿಂದ ಮೈಸೂರು ರಸ್ತೆಯಲ್ಲಿ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೀಗಾಗಿ ಮೈಸೂರು ಕಡೆ ಸಾಗುವ ವಾಹನಗಳನ್ನು ನೈಸ್ ರಸ್ತೆ ಸಮೀಪ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಈಗಾಗಲೇ ಹೆಬ್ಬಾಳದಲ್ಲಿ ಬಸ್‌ಗಳ ನಿಲುಗಡೆ ನಿಷೇಧಿಸಿದ್ದರಿಂದ ಸಂಚಾರ ದಟ್ಟಣೆ ಕಡಿಮೆಯಾಗಿದೆ ಎಂದಿದ್ದಾರೆ.