ಸಾರಾಂಶ
ಜಾರಿ ನಿರ್ದೇಶನಾಲಯವು (ಇ.ಡಿ) ರಾಜಕೀಯ ದುರುದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ನೋಟಿಸ್ ನೀಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಬೆಂಗಳೂರು : ಜಾರಿ ನಿರ್ದೇಶನಾಲಯವು (ಇ.ಡಿ) ರಾಜಕೀಯ ದುರುದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ನೋಟಿಸ್ ನೀಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜಕೀಯ ಪಿತೂರಿಯಿಂದ ನೋಟಿಸ್ ನೀಡಲಾಗಿದೆ. ನನ್ನ ವಿರುದ್ಧದ ಪ್ರಕರಣದಲ್ಲೂ ಹೀಗೆಯೇ ಮಾಡಲಾಗಿತ್ತು. ಒಂದು ಪ್ರಕರಣವನ್ನು ಒಂದೇ ಸಮಯದಲ್ಲಿ ಎರಡು ಸಂಸ್ಥೆಗಳು ತನಿಖೆ ನಡೆಸಲು ಸಾಧ್ಯವಿಲ್ಲ. ಮುಡಾ ಪ್ರಕರಣದ ಕುರಿತು ಲೋಕಾಯುಕ್ತ ತನಿಖೆ ನಡೆಸುತ್ತಿರುವಾಗಲೇ ಇ.ಡಿ ತನಿಖೆ ನಡೆಸಲಾಗದು. ಈ ಕುರಿತು ವಿವಿಧ ನ್ಯಾಯಾಲಯಗಳ ಅನೇಕ ತೀರ್ಪುಗಳಿವೆ. ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಸಚಿವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಯಾರೂ ಮಾತನಾಡಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ನಾವೆಲ್ಲರೂ ಮುಖ್ಯಮಂತ್ರಿ ಅವರ ಕೆಳಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಮುಡಾ ಕೇಸ್: 142 ಆಸ್ತಿ ನೋಂದಣಿಗೆ ಇ.ಡಿ. ತಡೆ
ಮೈಸೂರು : ಮುಡಾ 50-50 ಹಗರಣ ಸಂಬಂಧ 142 ಆಸ್ತಿಗಳ ಪಟ್ಟಿಗಳನ್ನು ಮೈಸೂರಿನ ಸಬ್ ರಿಜಿಸ್ಟಾರ್ ಕಚೇರಿಗೆ ಕಳುಹಿಸಿರುವ ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು, ಈ ಯಾವ ಆಸ್ತಿಯನ್ನು ಮರು ಮಾರಾಟ ನೋಂದಣಿ ಮಾಡದಂತೆ ಸೂಚಿಸಿದ್ದಾರೆ.
ಕೆಲವು ನಿವೇಶನಗಳನ್ನು ಪಡೆದಿರುವ ವ್ಯಕ್ತಿಗಳು ಮಾರಾಟ ಮಾಡಲು ಮುಂದಾಗಿದ್ದರು. ಹೀಗಾಗಿ, ಮೈಸೂರಿನ 4 ಸಬ್ ರಿಜಿಸ್ಟಾರ್‌ಗಳಿಗೂ ಮರು ಮಾರಾಟ ಮಾಡಿಕೊಡದಂತೆ ಅಧಿಕೃತವಾಗಿ ಇ.ಡಿ ಮಾಹಿತಿ ನೀಡಿದೆ. ಅಲ್ಲದೆ, ನಮ್ಮಿಂದ ಅಧಿಕೃತ ಆದೇಶ ಬರುವವರೆಗೂ ಯಾವುದೇ ಆಸ್ತಿಗಳನ್ನು ಬೇರೆಯವರಿಗೆ ರಿಜಿಸ್ಟಾರ್ ಮಾಡಿಕೊಡದಂತೆ ಸೂಚಿಸಿದೆ.
ನಿವೇಶನ ಮಾಹಿತಿ ಇ.ಡಿ.ಗೆ:
ಮುಡಾ ಆಯುಕ್ತರು 631 ನಿವೇಶನಗಳ ದಾಖಲೆಗಳನ್ನು ಇ.ಡಿ.ಗೆ ಕಳುಹಿಸಿದ್ದು, ಬಹುತೇಕ ಇದೇ ವಾರದಲ್ಲಿ 631 ನಿವೇಶನಗಳನ್ನು ಇ.ಡಿ ಸೀಜ್ ಮಾಡುವ ಸಾಧ್ಯತೆ ಇದೆ. 631 ನಿವೇಶನಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇನಾಮಿ ನಿವೇಶನಗಳು ಹೆಚ್ಚಿದೆ. ಕೆಲವು ಪ್ರತಿಷ್ಠಿತ ಉದ್ಯಮಿಗಳು ಕೂಡ ಆಸ್ತಿ ಪಡೆದಿದ್ದಾರೆ. ಸದ್ಯ ಈ ನಿವೇಶನಗಳ ಮೇಲೆ ಇ.ಡಿ. ಕಣ್ಣಿಟ್ಟಿದೆ.