ಯಾವೊಬ್ಬ ಅರ್ಹರ ಬಿಪಿಎಲ್‌ ಕಾರ್ಡ್‌ ಕೂಡ ರದ್ದಿಲ್ಲ - ಬಿಜೆಪಿಯಿಂದ ಅನಗತ್ಯ ಗೊಂದಲ ಸೃಷ್ಟಿ : ಸಿಎಂ

| Published : Nov 19 2024, 10:29 AM IST

Siddaramaiah

ಸಾರಾಂಶ

ಅನ್ನಭಾಗ್ಯ ಯೋಜನೆಯಡಿ ಅನರ್ಹರು ಪಡೆದಿರುವ ಬಿಪಿಎಲ್‌ ಕಾರ್ಡುಗಳನ್ನು ಮಾತ್ರ ರದ್ದುಪಡಿಸಲಾಗುವುದು. ಅರ್ಹರು ಅಂದರೆ ಯಾವೊಬ್ಬ ಬಡವರಿಗೂ ಬಿಪಿಎಲ್‌ ಕಾರ್ಡು ಕೈತಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ ಅನರ್ಹರು ಪಡೆದಿರುವ ಬಿಪಿಎಲ್‌ ಕಾರ್ಡುಗಳನ್ನು ಮಾತ್ರ ರದ್ದುಪಡಿಸಲಾಗುವುದು. ಅರ್ಹರು ಅಂದರೆ ಯಾವೊಬ್ಬ ಬಡವರಿಗೂ ಬಿಪಿಎಲ್‌ ಕಾರ್ಡು ಕೈತಪ್ಪುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕನಕ ಜಯಂತಿ ಪ್ರಯುಕ್ತ ಸೋಮವಾರ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಿಪಿಎಲ್‌ ಕಾರ್ಡುಗಳ ವಿಚಾರವಾಗಿ ಬಿಜೆಪಿಯವರು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಏಕಾಏಕಿ ಯಾರೊಬ್ಬರ ಬಿಪಿಎಲ್‌ ಪಡಿತರ ಚೀಟಿಗಳನ್ನೂ ರದ್ದುಪಡಿಸುವುದಿಲ್ಲ. ಬಿಪಿಎಲ್‌ ಕಾರ್ಡು ಪಡೆಯಲು ಯಾರು ಅರ್ಹರು, ಯಾರು ಅನರ್ಹರು ಎಂಬ ಮಾನದಂಡಗಳಿವೆ. ಅವುಗಳನ್ನು ಆಧರಿಸಿ ಯಾರಾದರೂ ಅರ್ಹತೆ ಇಲ್ಲದಿದ್ದರೂ ಬಿಪಿಎಲ್‌ ಕಾರ್ಡುಗಳನ್ನು ಹೊಂದಿದ್ದರೆ ಅಂತಹವರ ಕಾರ್ಡುಗಳನ್ನು ರದ್ದುಪಡಿಸಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಯಾವುದೇ ಅರ್ಹ ಕುಟುಂಬಗಳಿಗೂ ಬಿಪಿಎಲ್‌ ಕಾರ್ಡು ಕೈತಪ್ಪುವುದಿಲ್ಲ ಎಂದು ತಿಳಿಸಿದರು.

ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದು ನಾವೇ ಹೊರತು, ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಅಲ್ಲ. ಈ ಕಾರ್ಯಕ್ರಮ ತಂದಿದ್ದು ಇದೇ ಸಿದ್ದರಾಮಯ್ಯ. 2017ರಲ್ಲಿ ಒಂದು ರುಪಾಯಿಗೆ ನೀಡುತ್ತಿದ್ದ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು. ಇದನ್ನು ಬಿಜೆಪಿ ಮಾಡಲಿಲ್ಲ. ಅವರು ಸುಮ್ಮನೆ ಮಾತನಾಡುತ್ತಾರೆ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿ ಇಂಥ ಯೋಜನೆಯನ್ನು ಜಾರಿ ಮಾಡಿದ್ದಾರೆ ಹೇಳಲಿ ನೋಡೋಣ. ಗುಜರಾತ್, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ಹರಿಯಾಣ ಎಲ್ಲಿವೆ ಇಂತಹ ಯೋಜನೆಗಳು ತೋರಿಸಲಿ ಎಂದು ಪ್ರಶ್ನಿಸಿದರು.

ಅರ್ಹರ ಬಿಪಿಎಲ್‌ ಕಾರ್ಡುಗಳನ್ನೂ ರದ್ದುಮಾಡಿ ಏಕಾಏಕಿ ಎಪಿಎಲ್‌ಗೆ ಪರಿವರ್ತಿಸಲಾಗುತ್ತಿದೆ ಎಂಬ ಆರೋಪಗಳಿವೆಯಲ್ಲಾ ಎಂಬ ಪ್ರಶ್ನೆಗೆ, ಹಾಗೆಲ್ಲಾ ಏಕಾಏಕಿ ರದ್ದು ಮಾಡುವ ಸಾಧ್ಯತೆ ಇಲ್ಲ. ನೀವೇ ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ ಎಂದು ಮಾಧ್ಯಮದವರ ಮೇಲೇ ಗರಂ ಆದರು.

ಎಚ್‌ಡಿಕೆಗೆ ಯಾವ ನೈತಿಕತೆ ಇದೆ:

ಸರ್ಕಾರ ಬರೀ ಗ್ಯಾರಂಟಿ, ಗ್ಯಾರಂಟಿ ಎನ್ನುತ್ತಿದೆ ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎಂದು ಉತ್ತರ ಕೊಡಬೇಕೆಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ ಎಂಬ ಪ್ರಶ್ನೆಗೆ, ಎಚ್‌.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಯಾವುದಾದರೂ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರಿಗೆ ಕೊಟ್ಟಿದ್ದರಾ? ಅವರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ ಎಂದರು.