ಸಾರಾಂಶ
ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯಬ್ಬರ ಭಾನುವಾರ ಇಳಿಮುಖವಾದರೂ ಕೃಷ್ಣಾ ಮತ್ತು ಇತರೆ ನದಿಗಳ ಪ್ರವಾಹದಮಟ್ಟ ಮಾತ್ರ ಯಥಾಸ್ಥಿತಿಯಲ್ಲಿದೆ
ಬೆಳಗಾವಿ/ಬಾಗಲಕೋಟೆ : ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯಬ್ಬರ ಭಾನುವಾರ ಇಳಿಮುಖವಾದರೂ ಕೃಷ್ಣಾ ಮತ್ತು ಇತರೆ ನದಿಗಳ ಪ್ರವಾಹದಮಟ್ಟ ಮಾತ್ರ ಯಥಾಸ್ಥಿತಿಯಲ್ಲಿದೆ. ಸದ್ಯ ಶುಕ್ರವಾರದಿಂದೀಚೆಗೆ ಜಲದಿಗ್ಬಂಧನಕ್ಕೊಳಗಾಗಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಪ್ರವಾಹದಮಟ್ಟ ಇಳಿಕೆಯಾಗಿದ್ದರೂ ಬಾಗಲಕೋಟೆ ಜಿಲ್ಲೆಯ ನಂದಗಾಂವ ಗ್ರಾಮ ಜಲಾವೃತವಾಗಿದೆ.
ಬೆಳಗಾವಿ, ಬಾಗಲಕೋಟೆಯಲ್ಲಿ ಕೃಷ್ಣಾ, ದೂಧ್‌ಗಂಗಾ, ವೇದಗಂಗಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲೇ 8 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ. ಇದರಲ್ಲಿ 6,160 ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆದಿದ್ದಾರೆ. ಬೆಳಗಾವಿ, ಬಾಗಲಕೋಟೆಯ 50ಕ್ಕೂ ಅಧಿಕ ಸೇತುವೆಗಳು ಇನ್ನೂ ಮುಳುಗಡೆ ಸ್ಥಿತಿಯಲ್ಲೇ ಇದ್ದು, 4 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಕೃಷಿ ಪ್ರದೇಶದಲ್ಲಿನ ಬೆಳೆ ಹಾನಿಗೀಡಾಗಿದೆ.
ನಂದಗಾಂವಕ್ಕೆ ನುಗ್ಗಿದ ನೀರು: ಘಟಪ್ರಭಾ ನದಿಗೆ ಶುಕ್ರವಾರ ರಾತ್ರಿ ದುಪದಾಳ ಮಾರ್ಕಂಡೇಯ, ಬಳ್ಳಾರಿ ನಾಲಾದಿಂದ 60,000ಕ್ಕೂ ಅಧಿಕ ಕ್ಯುಸೆಕ್ ನೀರು ಹರಿಬಿಟ್ಟ ಪರಿಣಾಮ ನಂದಗಾಂವ ಗ್ರಾಮ ಜಲ ದಿಗ್ಭಂದನಕ್ಕೊಳಗಾಗಿದೆ. ಇನ್ನು ಮುಧೋಳ ನಗರದಲ್ಲೂ 50ಕ್ಕೂ ಅಧಿಕ ತಾತ್ಕಾಲಿಕ ಶೆಡ್‌ಗಳು ಜಲಾವೃತಗೊಂಡಿವೆ.
ಗೋಕಾಕ ಪ್ರವಾಹ ಇಳಿಕೆ: ಇನ್ನು ಬೆಳಗಾವಿ ತಾಲೂಕಿನ ಮಸಗುಪ್ಪಿ ಮತ್ತು ಪಟಗುಂದಿ ಗ್ರಾಮಕೂಡ ಜಲಾವೃತಗೊಂಡು ನಡಗಡ್ಡೆಯಾದಂತಾಗಿದೆ. ಆದರೆ ಮಳೆ ಇಳಿಮುಖವಾಗಿರುವ ಕಾರಣ ಕಳೆದೆರಡು ದಿನಗಳಿಂದ ಗೋಕಾಕ ನಗರ ವಸತಿ ಪ್ರದೇಶವನ್ನು ಆವರಿಸಿದ್ದ ಪ್ರವಾಹದ ನೀರು ಕೊಂಚ ಇಳಿಮುಖವಾಗಿದೆ. ಕೃಷ್ಣಾನದಿಯಲ್ಲಿ ಇನ್ನೂ 3ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿಯುತ್ತಿದ್ದು, ನದಿತಟದ ಹಲವು ಗ್ರಾಮಗಳಿಗೆ ಪ್ರವಾಹಮಟ್ಟ ಯಥಾಸ್ಥಿತಿಯಲ್ಲಿದೆ.
ಮತ್ತಷ್ಚು ದೇಗುಲಗಳಿಗೆ ಜಲ ದಿಗ್ಬಂಧನ
ಹಿಡಕಲ್ ಜಲಾಶಯ ಹಾಗೂ ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಪಟಗುಂದಿಯ ಜಡಿಸಿದ್ಧೇಶ್ವರ, ಹನಮಂತ ದೇವವರ, ಲಕ್ಷ್ಮೀ ದೇವಿ, ಬಸವಣ್ಣ ದೇವರ, ಸುಣಧೋಳಿಯ ಜಡಿಸಿದ್ಧೇಶ್ವರ ದೇವಸ್ಥಾನ, ಹುಣಶ್ಯಾಳ ಹಮಂತ ದೇವರು, ಮುನ್ಯಾಳ ಲಕ್ಷ್ಮೀ ದೇವಿ, ಕಮಲದಿನ್ನಿ ಲಕ್ಷ್ಮೀ ದೇವಸ್ಥಾನ ಸೇರಿ ಅನೇಕ ದೇವಸ್ಥಾನಗಳು ಜಲಾವೃತಗೊಂಡಿವೆ. ಇನ್ನು ಕೃಷ್ಣಾನದಿ ನೀರು ಚಿಕ್ಕೋಡಿ ತಾಲೂಕಿನ ಯಡೂರ ವೀರಭದ್ರಶ್ವೇರ ದೇವಸ್ಥಾನದೊಳಗೆ ನುಗ್ಗಿದೆ.
ಕೃಷ್ಣಾ ಪ್ರವಾಹದಲ್ಲಿ ಕೊಚ್ಚಿ ಹೋದ ಬಾಲಕಿ
ಜಮಖಂಡಿ: ಪಾತ್ರೆತೊಳೆಯಲೆಂದು ಕೃಷ್ಣಾ ನದಿ ತೀರಕ್ಕೆ ಹೋಗಿದ್ದ ತಾಯಿಯನ್ನು ಹುಡುಕಿಕೊಂಡು ಹೋಗಿದ್ದ ಮಗುವೊಂದು ಪ್ರವಾಹದ ಪಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬಾಲಕಿ ಸಮೃದ್ಧಿ ಸಿದ್ದಪ್ಪಾ ತಮ್ಮಪ್ಪನವರ(5) ನೀರು ಪಾಲಾದ ಬಾಲಕಿ. ನದಿ ನೀರು ಗ್ರಾಮದ ಸಮೀಪ ನುಗ್ಗಿದ್ದು, ಈ ನೀರಿನಲ್ಲಿ ಮಹಿಳೆಯೊಬ್ಬರು ಪಾತ್ರೆ ತೊಳೆಯಲೆಂದು ಹೋಗಿದ್ದರು. ತಾಯಿಯನ್ನು ಹುಡುಕಿಕೊಂಡು ನದಿ ಸಮೀಪದ ಬಂದಿದ್ದ ಬಾಲಕಿ ಈ ವೇಳೆ ಅನಿರೀಕ್ಷಿತವಾಗಿ ನೀರಿಗೆ ಬಿದ್ದು, ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.
ಟಿಬಿ ಡ್ಯಾಂ, ಕೆಆರ್‌ಎಸ್‌ನಿಂದ ತಲಾ 1.50 ಲಕ್ಷ ಕ್ಯುಸೆಕ್ ನೀರು ನದಿಗೆ
ಮುನಿರಾಬಾದ್/ಮಂಡ್ಯ
ತುಂಗಭದ್ರಾ ಜಲಾಶಯ ಮತ್ತು ಕೆಆರ್‌ಎಸ್ ಡ್ಯಾಂನಿಂದ ಸುಮಾರು 1.50 ಲಕ್ಷ ಕ್ಯುಸೆಕ್ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿ ಮತ್ತು ಕಾವೇರಿ ನದಿಗಳಲ್ಲಿ ಪ್ರವಾಹದ ಸ್ಥಿತಿ ಮುಂದುವರಿದಿದೆ.
ತುಂಗಭದ್ರಾ ನದಿ ನೀರಿನಮಟ್ಟ ಏರಿಕೆಯಾಗಿ ಸತತ 2ನೇ ದಿನವೂ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನದ ಸ್ನಾನಘಟ್ಟ, ಶಿವಪುರ ಗ್ರಾಮದ ಮಾರ್ಕೆಂಡೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. ಈ ಸ್ಥಿತಿ ಇನ್ನೂ 3-4 ದಿನ ಮುಂದುವರಿಯುವ ಸಾಧ್ಯತೆ ಇದೆ. ಅದೇ ರೀತಿ ಹಂಪಿಯ ನದಿಪಾತ್ರದ ಬಹುತೇಕ ಸ್ಮಾರಕಗಳೂ ಮುಳುಗಡೆಯಾಗಿವೆ. ಇನ್ನು ರಾಯರು ತಪಸ್ಸು ಮಾಡಿದ ಮಂತ್ರಾಲಯದ ಎಲೆಬಿಚ್ಚಾಲಿ ಜಪದ ಕಟ್ಟೆ ಸುತ್ತಲೂ ನೀರು ಆವರಿಸಿದೆ.
ರಾಮಕೃಷ್ಣ ಆಶ್ರಮ ಜಲಾವೃತ: ಕಾವೇರಿ ನದಿತಟದಲ್ಲೂ ಪ್ರವಾಹ ಸ್ಥಿತಿ ಇದ್ದು, ಮಂಡ್ಯದ ತಲಕಾಡಿನ ಹೆಮ್ಮಿಗೆ ಸೇತುವೆ ಮುಳುಗಡೆಯಾಗಿ ನರಸೀಪುರ-ತಲಕಾಡು ಸಂಚಾರ ಬಂದ್ ಆಗಿದೆ. ಜತೆಗೆ ಶ್ರೀರಂಗಪಟ್ಟಣದ ರಾಮಕೃಷ್ಣ ವಿವೇಕಾನಂದ ಆಶ್ರಮವೂ ಜಲಾವೃತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಆಶ್ರಮದ ಸ್ವಾಮೀಜಿ ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ.