ಸಾರಾಂಶ
ನೆರೆಹೊರೆಯ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ಕರ್ನಾಟಕದಲ್ಲಿ ದರ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ, ಒಂದೆರಡು ದಿನದಲ್ಲೇ ದುಬಾರಿ ದರದ ಮದ್ಯಗಳ ಬೆಲೆಯನ್ನು ಇಳಿಕೆ ಮಾಡುವ ಸಾಧ್ಯತೆಯಿದೆ.
ಬೆಂಗಳೂರು : ನೆರೆಹೊರೆಯ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ಕರ್ನಾಟಕದಲ್ಲಿ ದರ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ, ಒಂದೆರಡು ದಿನದಲ್ಲೇ ದುಬಾರಿ ದರದ ಮದ್ಯಗಳ ಬೆಲೆಯನ್ನು ಇಳಿಕೆ ಮಾಡುವ ಸಾಧ್ಯತೆಯಿದೆ.
ನೆರೆಹೊರೆಯ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ನಮ್ಮಲ್ಲಿ ದರ ಪರಿಷ್ಕರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು. ಇದರಿಂದ ತಿಂಗಳಿಗೆ 3-4 ಸಾವಿರ ಕೋಟಿ ರು. ಅಧಿಕ ರಾಜಸ್ವ ನೀರಿಕ್ಷಿಸಲಾಗಿತ್ತು. ಬಳಿಕ ಅಕ್ಕಪಕ್ಕದ ರಾಜ್ಯಗಳ ದರ ಪರಿಶೀಲಿಸಿದಾಗ ನಮ್ಮಲ್ಲಿ ‘ದುಬಾರಿ ಬೆಲೆಯ’ ಮದ್ಯದ ದರ ಹೆಚ್ಚಾಗಿದ್ದು ಗಡಿ ಭಾಗದವರು ಬೇರೆ ರಾಜ್ಯಗಳಿಗೆ ತೆರಳಿ ಖರೀದಿ ಮಾಡುತ್ತಾರೆ ಹಾಗೂ ಅಗ್ಗದ ದರದ ಮದ್ಯಗಳ ಬೆಲೆ ಕಡಿಮೆ ಇದೆ ಎಂಬುದು ಬೆಳಕಿಗೆ ಬಂದಿತ್ತು.
ಆದ್ದರಿಂದ ದುಬಾರಿ ಬೆಲೆಯ ಮದ್ಯದ ದರ ಕಡಿಮೆ ಮಾಡಬೇಕು. ಅಗ್ಗದ ದರದ ಮದ್ಯಗಳ ಬೆಲೆ ಹೆಚ್ಚಿಸಬೇಕು ಎಂದು ಅಬಕಾರಿ ಇಲಾಖೆ ಬೇಡಿಕೆ ಇಟ್ಟಿತ್ತು. ಬಡವರು ಸೇವಿಸುವ ಅಗ್ಗದ ದರದ ಮದ್ಯಗಳು ರಾಜ್ಯದಲ್ಲಿ ಹೆಚ್ಚು ಮಾರಾಟವಾಗುತ್ತವೆ. ಜೂ.1ರಿಂದಲೇ ಈ ಹೊಸ ದರ ಪಟ್ಟಿ ಜಾರಿಗೆ ಬರಬೇಕಿತ್ತು. ಆದರೆ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡದಿದ್ದರಿಂದ ಜಾರಿಯಾಗಿರಲಿಲ್ಲ. ಬಳಿಕ ಜು.1ರಿಂದಲಾದರೂ ಹೊಸ ದರ ಜಾರಿಯಾಗಬಹುದು ಎನ್ನಲಾಗಿತ್ತಾದರೂ ಇದಕ್ಕೂ ಸಿದ್ದರಾಮಯ್ಯ ಸಮ್ಮತಿ ಸೂಚಿಸಿರಲಿಲ್ಲ.
ಸರಬರಾಜಾಗದ ಮದ್ಯ: ದರ ವ್ಯತ್ಯಾಸ ಆಗಲಿದ್ದ ಹಿನ್ನೆಲೆಯಲ್ಲಿ ಮಾರಾಟಗಾರರಿಗೆ ಸರಿಯಾಗಿ ಮದ್ಯ ಸರಬರಾಜಾಗುತ್ತಿರಲಿಲ್ಲ. ಇದರಿಂದ ಬಾರ್, ವೈನ್ ಸ್ಟೋರ್‌ಗಳ ಮಾಲೀಕರು ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ಅಬಕಾರಿ ಇಲಾಖೆಯ ಆದಾಯಕ್ಕೂ ಕುತ್ತು ಬಂದಿದ್ದು, ದರ ಪರಿಷ್ಕರಣೆಗೆ ಸಮ್ಮತಿ ಸೂಚಿಸಬೇಕು ಎಂದು ಇಲಾಖೆಯಿಂದ ಒತ್ತಡವಿತ್ತು. ಇದೀಗ ಸಿದ್ದರಾಮಯ್ಯ ಅವರು 1-2 ದಿನದಲ್ಲೇ ದುಬಾರಿ ದರದ ಮದ್ಯದ ಬೆಲೆ ತುಸು ಇಳಿಕೆಗೆ ಸಮ್ಮತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಅಗ್ಗದ ಮದ್ಯದ ದರ ಹೆಚ್ಚಳ ಸದ್ಯಕ್ಕಿಲ್ಲ : ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ದುಬಾರಿ ಬೆಲೆಯ ಮದ್ಯಗಳ ದರ ಇಳಿಕೆಯ ಜೊತೆಗೇ ಅಗ್ಗದ ದರದ ಮದ್ಯಗಳ ಬೆಲೆಯೂ ಹೆಚ್ಚಳವಾಗಬೇಕಿತ್ತು. ಆದರೆ, ಬೆಲೆ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತವಾಗಬಹುದು ಎಂಬ ಹಿನ್ನೆಲೆಯಲ್ಲಿ ‘ಸದ್ಯಕ್ಕೆ ದುಬಾರಿ ಬೆಲೆಯ ಮದ್ಯದ ದರಗಳನ್ನು ಮಾತ್ರ ಕಡಿಮೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದ ತಕ್ಷಣವೇ ಹೊಸ ದರಗಳು ಅನ್ವಯವಾಗಲಿವೆ. ಮುಂದಿನ ದಿನಗಳಲ್ಲಿ ಸರ್ಕಾರ ಒಪ್ಪಿದ ಬಳಿಕ ಅಗ್ಗದ ಮದ್ಯಗಳ ದರ ಹೆಚ್ಚಳವಾಗಲಿದೆ’ ಎಂದು ಮೂಲಗಳು ತಿಳಿಸಿವೆ.