ಸಾರಾಂಶ
ಭಾರತೀಯ ಸೇನೆ ನಡೆಸಿದ ‘ಆಪರೇಶನ್ ಸಿಂಧೂರ್’ಗೆ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದೆ
ಸಿನಿವಾರ್ತೆ
ಪಹಲ್ಗಾಮ್ ಘಟನೆಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಶನ್ ಸಿಂಧೂರ್’ಗೆ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದೆ. ಶಿವರಾಜ್ ಕುಮಾರ್, ಸುದೀಪ್, ಜಗ್ಗೇಶ್ ಮೊದಲಾದವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಭಾರತೀಯ ಸೇನೆಯ ಧೈರ್ಯ, ಶೌರ್ಯವನ್ನು ಮೆಚ್ಚಿಕೊಂಡಿದ್ದಾರೆ. ಬಹುತೇಕರು ‘ಆಪರೇಷನ್ ಸಿಂಧೂರ್’ ಪೋಸ್ಟರ್ ಅನ್ನು ಸೋಷಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಿವರಾಜ್ ಕುಮಾರ್, ‘ಮನುಷ್ಯನ ಜೀವ ತೆಗೆಯೋದು ಅಷ್ಟು ಸುಲಭ ಅಲ್ಲ. ಮನುಷ್ಯನಿಗೆ ಪ್ರಾಣ ಅನ್ನೋದು ಒಂದು ಗಿಫ್ಟ್. ಅದನ್ನು ಯಾರೋ ಬಂದು ಹೊಡೆದು ಹಾಕಿದರೆ ಹೇಗಾಗಬೇಡ? ಆಪರೇಷನ್ ಸಿಂಧೂರ್ ಮೂಲಕ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ. ಕೇಂದ್ರ ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ಅದು ಸರಿಯಾಗಿಯೇ ಇರುತ್ತೆ ಎನ್ನುವ ನಂಬಿಕೆಯಿದೆ’ ಎಂದಿದ್ದಾರೆ.
ಸುದೀಪ್, ‘ಓರ್ವ ಭಾರತೀಯನಾಗಿ, ಈ ಪವಿತ್ರ ಭೂಮಿಯ ಮಗನಾಗಿ ಪಹಲ್ಗಾಮ್‌ನಲ್ಲಿ ನಡೆದ ಘಟನೆ ನನಗೆ ಅಪಾರ ನೋವು ಉಂಟುಮಾಡಿತ್ತು. ಇಂದು ನನಗೆ ಸರಿಯಾದ ನ್ಯಾಯ ಸಿಕ್ಕಂತೆ ಅನಿಸುತ್ತಿದೆ. ಆಪರೇಷನ್ ಸಿಂಧೂರ್ ಮೂಲಕ ಭಾರತದ ಸಿಂಧೂರಕ್ಕೆ ಮತ್ತೆ ರಂಗೇರಿದೆ. ಧೀರ ಗುಂಡಿಗೆಯ ಮಂದಿ ಸಿಂಧೂರದ ಗೌರವವನ್ನು ಮರಳಿ ತಂದಿದ್ದಾರೆ. ನಮ್ಮ ಸಶಸ್ತ್ರ ಪಡೆಗಳಿಗೆ ನನ್ನ ಅನಂತ ಗೌರವ. ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಭೀತ ದೃಢ ನಡೆಗೆ ನಮನ. ಇಡೀ ಘಟನೆಯನ್ನು ಜಗತ್ತಿನ ಮುಂದೆ ತೆರೆದಿಟ್ಟ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರಿಗೆ ನನ್ನ ಗೌರವ. ಭಾರತ ಎಂದೂ ಮರೆಯುವುದಿಲ್ಲ, ಭಾರತ ಕ್ಷಮಿಸುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.