ಸಾರಾಂಶ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಶನಿವಾರ ಕಡೆ ದಿನವಾಗಿದ್ದು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 7.5 ಲಕ್ಷ ಮನೆಗಳಿಂದ 13 ಲಕ್ಷ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. 27 ಸಾವಿರ ಜನರು ಸಮೀಕ್ಷೆಯನ್ನು ತಿರಸ್ಕರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಶನಿವಾರ ಕಡೆ ದಿನವಾಗಿದ್ದು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 7.5 ಲಕ್ಷ ಮನೆಗಳಿಂದ 13 ಲಕ್ಷ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. 27 ಸಾವಿರ ಜನರು ಸಮೀಕ್ಷೆಯನ್ನು ತಿರಸ್ಕರಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಸಮೀಕ್ಷೆ ಕಾರ್ಯ ಪ್ರಗತಿಯ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು ನಗರ ಜನಸಂಖ್ಯೆಯನ್ನು ಕೂಡ ದೊಡ್ಡ ಪ್ರಮಾಣದಲ್ಲಿ ಹೊಂದಿರುವ ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಶೇ.85ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. 67,000 ಜನರ ಮನೆಗಳಿಗೆ ಬೀಗ ಹಾಕಿದ್ದ ಕಾರಣ ಸಮೀಕ್ಷೆ ಆಗಿಲ್ಲ. ಶನಿವಾರವೂ ಸಮೀಕ್ಷೆ ನಡೆಸಿದರೆ ಶೇ.90ರಷ್ಟು ಗುರಿ ಸಾಧಿಸಬಹುದು. 7.91 ಲಕ್ಷ ಮನೆಗಳ ಪೈಕಿ ಶುಕ್ರವಾರ ಸಂಜೆವರೆಗೆ 7.5 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಸಮೀಕ್ಷೆಗೆ ನಿರಾಕರಿಸಿದವರಲ್ಲಿ ಹೆಚ್ಚಿನವರು ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ಹೊರ ರಾಜ್ಯದವರಾಗಿದ್ದಾರೆ. ಸ್ಥಳೀಯ ನಿವಾಸಿಗಳಲ್ಲಿ ಬಹುತೇಕರು ಸಮೀಕ್ಷೆಗೆ ಸಹಕರಿಸಿದ್ದಾರೆ. ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷಕರನ್ನು ಒಳಬಿಡಲು ನಿರಾಕರಿಸಲಾಗಿತ್ತು. ಈ ವೇಳೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದಾಗ ಸಮೀಕ್ಷಕರನ್ನು ಒಳಗೆ ಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಪೂರ್ಣ ಮಾಹಿತಿ: ನಿಗದಿತ ಅವಧಿಯಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂಬ ಒತ್ತಡಕ್ಕೆ ಒಳಗಾಗಿರುವ ಸಮೀಕ್ಷಕರು, ಅನೇಕ ಕಡೆ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿಲ್ಲ ಎನ್ನುವ ದೂರುಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ಸಮೀಕ್ಷಕರಿಗೆ ಯಾವುದೇ ಒತ್ತಡ ಇಲ್ಲ.ಕೆಲವು ಕಡೆ ಬೇರೆ ಬೇರೆ ಕಾರಣಗಳಿಂದ ಮಾಹಿತಿ ಪೂರ್ತಿಯಾಗಿ ಪಡೆಯದೇ ಇದ್ದಿರಬಹುದು. ಆದರೆ, ಗುರಿ ನೀಡಿದ ಪ್ರಕಾರ ಎಲ್ಲ ಮನೆಗಳು ಹಾಗೂ ಜನರಿಂದ ಮಾಹಿತಿಯನ್ನು ಸಮೀಕ್ಷಕರು ಸಂಗ್ರಹಿಸುತ್ತಿದ್ದಾರೆ. ಸಮೀಕ್ಷಕರ ಮಾಹಿತಿ ನಿಖರತೆಯನ್ನು ಮತ್ತೊಂದು ಸುತ್ತಿನ ಪರಿಶೀಲನೆ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.