ಸಾರಾಂಶ
ಸೂಕ್ತ ಸಮಯಕ್ಕೆ ಯುವಕನಿಗೆ ಅಂಗಾಂಗ ಕಸಿ ನೆರವೇರಿಸಲು ನಗರದ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಮೆಟ್ರೋ ರೈಲಿನ ಮೂಲಕ ಯಕೃತ್ತು ಸಾಗಾಟ ಮಾಡಲಾಗಿದೆ
ಬೆಂಗಳೂರು : ಸೂಕ್ತ ಸಮಯಕ್ಕೆ ಯುವಕನಿಗೆ ಅಂಗಾಂಗ ಕಸಿ ನೆರವೇರಿಸಲು ನಗರದ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಮೆಟ್ರೋ ರೈಲಿನ ಮೂಲಕ ಯಕೃತ್ತು ಸಾಗಾಟ ಮಾಡಲಾಗಿದೆ. ಇದು ಅಂಗಾಂಗದ ತ್ವರಿತ ರವಾನೆಗೆ ನಮ್ಮ ಮೆಟ್ರೋ ಬಳಸಿದ ಮೊದಲ ಪ್ರಕರಣ ಹಾಗೂ ದೇಶದ ಎರಡನೇ ಘಟನೆಯಾಗಿದೆ.
ಶುಕ್ರವಾರ ರಾತ್ರಿ ಬೆಂಗಳೂರಿನ ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣದಿಂದ ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣಕ್ಕೆ ಯಕೃತ್‌ನ್ನು ಮೆಟ್ರೋ ರೈಲಿನ ಮೂಲಕ ತಂದು ಕಸಿ ನೆರವೇರಿಸಲಾಯಿತು. ವಾರಾಂತ್ಯದ ಸಂಚಾರ ದಟ್ಟಣೆ ಮತ್ತು ಅಂಗಾಂಗವು ಕೆಡದಂತೆ ಕೆಲವೇ ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಯಕೃತ್ ಕಸಿ ಮಾಡಬೇಕಿದ್ದ ಹಿನ್ನೆಲೆಯಲ್ಲಿ ಯಕೃತ್ ಸಾಗಾಟಕ್ಕೆ ನಮ್ಮ ಮೆಟ್ರೋ ನೆರವಾಗಿದೆ.
ಏನಾಗಿತ್ತು?
ಅಪಘಾತದಿಂದ ಮೃತಪಟ್ಟಿದ್ದ 24 ವರ್ಷದ ಯುವಕನ ಹೃದಯ, ಯಕೃತ್ ಮತ್ತಿತರ ಅಂಗಾಂಗ ದಾನಕ್ಕೆ ಯುವಕನ ಕುಟುಂಬ ಸಮ್ಮತಿ ಸೂಚಿಸಿತ್ತು. ಇದೇ ವೇಳೆ ರಾಜರಾಜೇಶ್ವರಿ ನಗರದ ಸ್ಪರ್ಶ್ ಆಸ್ಪತ್ರೆಯ 30 ವರ್ಷದ ರೋಗಿಯೊಬ್ಬರು ತೀವ್ರ ಪ್ರಮಾಣದ ಹೆಪಟೈಟಿಸ್‌ನಿಂದಾಗಿ ಯಕೃತ್ ವೈಫಲ್ಯಕ್ಕೆ ಒಳಗಾಗಿದ್ದರು. ಯಕೃತ್ ಕಸಿಗಾಗಿ ಕಳೆದ ಎರಡು ತಿಂಗಳಿನಿಂದ ನಿರೀಕ್ಷೆಯಲ್ಲಿದ್ದರು. ದಾನಿ ಸಿಕ್ಕ ಬಳಿಕ ಯಕೃತ್ತು ಸಾಗಾಟಕ್ಕಾಗಿ ಮೆಟ್ರೋ ಕೋರಲಾಯಿತು. ತಕ್ಷಣವೇ ಕಾರ್ಯಪ್ರವೃತ್ತವಾದ ಮೆಟ್ರೋ ಸುರಕ್ಷತಾ ಸಿಬ್ಬಂದಿ ಯಕೃತ್ ಸಾಗಾಟ ಪ್ರಕ್ರಿಯೆಗೆ ಕೈಜೋಡಿಸಿದರು. 31 ಕಿಮೀನ ಈ ಪ್ರಯಾಣದಲ್ಲಿ ಮೆಟ್ರೋ ರೈಲು ಎಂದಿನಂತೆ 55 ನಿಮಿಷಗಳಲ್ಲಿ 32 ನಿಲ್ದಾಣಗಳನ್ನು ದಾಟಿ ಅಂಗಾಂಗವನ್ನು ಸುರಕ್ಷಿತವಾಗಿ ತಲುಪಿಸಿತು.
ದಾನಿಯ ಯಕೃತ್ ಮತ್ತು ರೋಗಿಯ ಯಕೃತ್ ಹೊಂದಾಣಿಕೆ ಆಗುತ್ತಿದ್ದುದರಿಂದ ತಕ್ಷಣ ಕಾರ್ಯಪ್ರವೃತ್ತವಾದ ಸ್ಪರ್ಶ್ ವೈದ್ಯರ ತಂಡ ಯಕೃತ್ ಅಂಗಾಗ ಕಸಿ ಹಿರಿಯ ಸಮಾಲೋಚಕ ಡಾ.ಮಹೇಶ್ ಗೋಪಸೆಟ್ಟಿ ನೇತೃತ್ವದಲ್ಲಿ ಯಕೃತ್ ಕಸಿ ನೆರವೇರಿಸಿದರು. ರೋಗಿಯು ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಮೆಟ್ರೋ, ಕರ್ನಾಟಕ ಅಂಗಾಂಗ ಕಸಿ ಪ್ರಾಧಿಕಾರ ಸೊಟ್ಟೋ ಹಾಗೂ ಸ್ಪರ್ಶ್ ಆಸ್ಪತ್ರೆಯ ನುರಿತ ವೈದ್ಯರು ಹಾಗೂ ತಂಡದ ಸಮನ್ವಯದಿಂದ ಇದು ಸಾಧ್ಯವಾಗಿದೆ.
ಮೆಟ್ರೋದಲ್ಲಿ ಮೊದಲು:
ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುವ ನಮ್ಮ ಮೆಟ್ರೋ ಶುಕ್ರವಾರ ಇದೇ ಮೊದಲ ಬಾರಿಗೆ ಅಂಗಾಂಗ ಸಾಗಣೆಗೆ ಸಾಕ್ಷಿಯಾಯಿತು. ಸಂಜೆಯ ಸಂಚಾರ ದಟ್ಟಣೆಯಿಂದಾಗಿ ರಸ್ತೆ ಮಾರ್ಗದ ಮೂಲಕ ಯಕೃತ್ ಸಾಗಣೆಗೆ ಕನಿಷ್ಠ 3 - 4 ಗಂಟೆಗಳ ಕಾಲ ತಗಲುತ್ತಿತ್ತು. ಭಾರೀ ದಟ್ಟಣೆಯ ಈ ಅವಧಿಯಲ್ಲಿ ಗ್ರೀನ್ ಕಾರಿಡಾರ್ ಮಾಡುವುದು ಸವಾಲಾಗಿತ್ತು. ಹೀಗಾಗಿ ಮೆಟ್ರೋ ಮೂಲಕ ಯಕೃತ್ ಸಾಗಿಸುವ ನಿರ್ಧಾರಕ್ಕೆ ಮೆಟ್ರೋ ತಕ್ಷಣವೇ ಸ್ಪಂದಿಸಿ ಅನುಮತಿ ನೀಡಿತು.
ವೈಟ್‌ಫೀಲ್ಡ್‌ನ ಖಾಸಗಿ ಆಸ್ಪತ್ರೆಯಿಂದ 5.5 ಕಿಮೀ ದೂರದ ಕಾಡುಗೋಡಿ ಮೆಟ್ರೋ ನಿಲ್ಧಾಣಕ್ಕೆ ಗ್ರೀನ್ ಕಾರಿಡಾರ್ ಮೂಲಕ ಯಕೃತ್ ಸಾಗಿಸಲಾಯಿತು. ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ ತಲುಪುತ್ತಿದ್ದಂತೆ ಯಕೃತ್‌ನ್ನು ಮತ್ತೆ ಗ್ರೀನ್ ಕಾರಿಡಾರ್ ಮೂಲಕ 2.5 ಕಿಮೀ ದೂರದ ಸ್ಪರ್ಶ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಮೆಟ್ರೋ ರೈಲಿನ ಕೊನೆಯ ಬೋಗಿಯನ್ನು ಇದಕ್ಕಾಗಿಯೇ ಮೀಸಲಿಟ್ಟಿದ್ದಲ್ಲದೆ ಅತ್ಯಂತ ಜನದಟ್ಟಣೆಯ ಸಂಚಾರ ಸಮಯದಲ್ಲಿ ದಿನ ನಿತ್ಯದ ಪ್ರಯಾಣಿಕರಿಗೆ ಅಡಚಣೆ ಆಗದಂತೆ ಕ್ರಮ ಕೈಗೊಂಡಿತ್ತು. ಎರಡೂ ನಿಲ್ದಾಣಗಳ ಎಲವೇಟರ್ ಮತ್ತು ಲಿಫ್ಟ್‌ಗಳನ್ನು ಕಾದಿರಿಸಿ ಯಕೃತ್ ಸಾಗಣೆಗೆ ಅನುವು ಮಾಡಿಕೊಟ್ಟಿತು.