ಸಾರಾಂಶ
ನೀರುಗಾಲುವೆಗಳಲ್ಲಿ ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ವಿವಿಧ ಟೆಕ್ ಪಾರ್ಕ್‌ಗಳು ಕಟ್ಟಡ ನಿರ್ಮಿಸಿ ಮುಚ್ಚಿರುವುದರಿಂದಲೇ ಈ ಭಾಗದಲ್ಲಿ ಮಳೆಯಿಂದ ಪ್ರವಾಹ ಸ್ಥಿತಿ
ಬೆಂಗಳೂರು : ಮಾನ್ಯಾತಾ ಟೆಕ್ ಬಳಿಯ ನೀರುಗಾಲುವೆಯನ್ನು ಎಂ.ಎಸ್.ಕಾರ್ಲೆ ಸಂಸ್ಥೆಗೆ ರಾಜ್ಯ ಸರ್ಕಾರ ಮಾರಾಟ ಮಾಡಿರುವುದು ಹಾಗೂ ಇನ್ನುಳಿದ ನೀರುಗಾಲುವೆಗಳಲ್ಲಿ ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ವಿವಿಧ ಟೆಕ್ ಪಾರ್ಕ್‌ಗಳು ಕಟ್ಟಡ ನಿರ್ಮಿಸಿ ಮುಚ್ಚಿರುವುದರಿಂದಲೇ ಈ ಭಾಗದಲ್ಲಿ ಮಳೆಯಿಂದ ಪ್ರವಾಹ ಸ್ಥಿತಿ ಉಂಟಾಗುತ್ತಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದ ತಂಡದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ಸೂಚನೆ ಮೇರೆಗೆ ರಚನೆಯಾಗಿದ್ದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಬಿಎಂಪಿಯ ವಿಶೇಷ ಆಯುಕ್ತ ಮನೀಶ್ ಮೌದ್ಗಿಲ್ ನೇತೃತ್ವದ ತಂಡ ಬಿಬಿಎಂಪಿಯ ಮುಖ್ಯ ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ಪ್ರವಾಹ ಪರಿಸ್ಥಿತಿಗೆ ಕಾರಣ ಹಾಗೂ ಪರಿಹಾರಗಳ ಬಗ್ಗೆ ಸಲಹೆ ನೀಡಲಾಗಿದೆ.
ಸಮಸ್ಯೆ ಶಾಶ್ವತ ಪರಿಹಾರಕ್ಕೆ ರಾಜಕಾಲುವೆ ಸಂಪರ್ಕಿಸುವ ನೀರುಗಾಲುವೆಗಳ ನಿರ್ಮಾಣ ಅತ್ಯಗತ್ಯವಾಗಿದ್ದು, ಇದರ ಸಂಪೂರ್ಣ ವೆಚ್ಚ ಒತ್ತುವರಿ ಮಾಡಿರುವ ಖಾಸಗಿ ಕಂಪನಿಗಳಿಂದಲೇ ಭರಿಸಬೇಕು. ನೀರುಗಾಲುವೆಗಳ ನಿರ್ಮಾಣಕ್ಕೆ ಭೂಮಿಯನ್ನು ಎಲ್ಲ ಖಾಸಗಿ ಕಂಪನಿಗಳೇ ಸಮಾನವಾಗಿ ಉಚಿತವಾಗಿ ನೀಡಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
ಮಾನ್ಯತಾ ಟೆಕ್ ಪಾರ್ಕ್ ಒಳಗೆ ಹಾಕಲಾದ ಕಾಂಕ್ರೀಟ್ ಮತ್ತು ನಿರ್ಮಾಣ ಕಾರ್ಯಗಳಿಂದಲೂ ಜಲಾವೃತಕ್ಕೆ ಕಾರಣವಾಗಿದೆ. ಮಾನ್ಯತಾ ಟೆಕ್ ಪಾರ್ಕ್ ಪ್ರತಿನಿಧಿಗಳು ಹೇಳುವಂತೆ ಮಳೆ ನೀರು ನಿಂತಾಗ ಪಂಪ್ಗಳನ್ನು ಬಳಸಿ ನೀರು ಹೊರಹಾಕುವುದು ಅಥವಾ ಸಂಪ್ಗಳನ್ನು ನಿರ್ಮಿಸುವ ಕಾರ್ಯ ಶಾಶ್ವತ ಪರಿಹಾರವಲ್ಲ. ನೀರು ನಿಲ್ಲುವ ಪ್ರದೇಶಗಳಿಂದ ನೀರುಗಾಲುವೆಗಳ ನಿರ್ಮಿಸಿ ಇಳಿಜಾರಿನ ಮೂಲಕ ಬೃಹತ್ ರಾಜಕಾಲುವೆಗೆ ಸಂಪರ್ಕಿಸುವಂತೆ ವಿನ್ಯಾಸ ಮಾಡಬೇಕು. ನೀರುಗಾಲುವೆಗಳ ನಿರ್ಮಾಣಕ್ಕಾಗಿ ಯಾವುದೇ ಮುಖ್ಯ ಕಟ್ಟಡಗಳ ತೆರವು ಮಾಡುವುದು ಅಗತ್ಯವಿಲ್ಲ. ಕಟ್ಟಡಗಳ ಗಡಿ ಭಾಗದ ಮೂಲಕ ನೀರುಗಾಲುವೆಗಳ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಪ್ರಮುಖವಾಗಿ ತಿಳಿಸಲಾಗಿದೆ.
ಸರ್ಕಾರದಿಂದಲೇ ನೀರುಗಾಲುವೆ ಮಾರಾಟ:
ಕರ್ನಾಟಕ ಭೂಸುಧಾರಣಾ ಕಾಯ್ದೆ-1964ರ ತಿದ್ದುಪಡಿಯಾಗಿ ಜಾರಿಗೆ ತಂದ ಸೆಕ್ಷನ್ 69-ಎ ಅಡಿಯಲ್ಲಿ ಎಂ.ಎಸ್ ಕಾರ್ಲೆ ಸಂಸ್ಥೆಗೆ ನೀರುಗಾಲುವೆಗಳನ್ನು 2020ರಲ್ಲಿ ರಾಜ್ಯ ಸರ್ಕಾರ ಮಾರಾಟ ಮಾಡಿದೆ. ಇನ್ನುಳಿದ ನೀರುಗಾಲುವೆಗಳನ್ನು ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ಇನ್ನಿತರೆ ಟೆಕ್ ಪಾರ್ಕ್‌ಗಳು ಕಟ್ಟಡ ನಿರ್ಮಿಸಿ ಮುಚ್ಚಿ ಹಾಕಲಾಗಿದೆ. ಟೆಕ್‌ಪಾರ್ಕ್ ನಿರ್ಮಾಣ ಮಾಡಿದ ಭೂಮಿಯು ದಶಕಗಳ ಹಿಂದೆ ಕೃಷಿ ಭೂಮಿಗಳಾಗಿದ್ದವು. ಕಟ್ಟಡಗಳು ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಕೃಷಿ ಭೂಮಿಯಲ್ಲಿ ಹಾದುಹೋಗಿದ್ದ ನೈಸರ್ಗಿಕ ನೀರಿನ ಹರಿವಿಗೆ ಅಡ್ಡಿಪಡಿಸಲಾಗಿದೆ. ದಾಖಲೆಯಲ್ಲಿರುವ ಚರಂಡಿಗಳನ್ನು ಸಹ ಅಡ್ಡಿಪಡಿಸಿ ಅವುಗಳ ಮೇಲೆ ಕಟ್ಟಡಗಳ ನಿರ್ಮಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ವರದಿಯಲ್ಲಿರುವ ಸಲಹೆಗಳು
ಮಾನ್ಯತಾ ಟೆಕ್‌ಪಾರ್ಕ್ ಬಳಿ ಮಳೆ ನೀರು ಸರಾಗವಾಗಿ ಹರದಿ ಹೋಗಲು ಬೃಹತ್ ರಾಜಕಾಲುವೆ ನಿರ್ಮಿಸಬೇಕು, ಈ ರಾಜಕಾಲುವೆಗೆ ನೀರನ್ನು ಹರಿಸಲು ಸರ್ವೆ ಸ್ಕೆಚ್ಗೆ ಅನುಗುಣವಾಗಿ ಚರಂಡಿಗಳು, ನೀರುಗಾಲುವೆ ನಿರ್ಮಿಸಬೇಕು. ನಾಗವಾರ ಕೆರೆಯಿಂದ ಕಲ್ಕೆರೆ ಕೆರೆಗೆ ಹರಿಯುವ ರಾಜಕಾಲುವೆಗೆ ಮಾನ್ಯತಾ ಟೆಕ್ಪಾರ್ಕ್ನ ನೀರುಗಾಲುವೆಗಳನ್ನು ಸಂಪರ್ಕಿಸುವಂತೆ ಮಾಡಬೇಕು. ರಾಜಕಾಲುವೆಯಲ್ಲಿ ಬಹಳಷ್ಟು ಹೂಳು ತುಂಬಿದ್ದು ಮೊದಲು ಅದನ್ನು ಸ್ವಚ್ಛಗೊಳಿಸಬೇಕಿದೆ, ರಾಜಕಾಲುವೆ ಸುತ್ತಲಿನ ಬಫರ್ ಜೋನ್ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದೆ.
ನೀರು ಗಾಲುವೆಗಳನ್ನು ಸರ್ಕಾರವೇ ಕಾರ್ಲೆ ಸಂಸ್ಥೆಗೆ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ರಾಜಕಾಲುವೆ ನಕ್ಷೆ ಮತ್ತು ದಾಖಲೆ ಆಧಾರಿಸಿ ರಾಜಕಾಲುವೆ ನಿರ್ಮಾಣ ಮಾಡಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವ ಕ್ರಮ ಕೈಗೊಳ್ಳಲಾಗುವುದು.
- ಮಹೇಶ್ವರ್ ರಾವ್, ಮುಖ್ಯ ಆಯುಕ್ತ, ಬಿಬಿಎಂಪಿ