ಶುಭಸುದ್ದಿ: ವಾರದಲ್ಲಿ ರಾಜ್ಯದ ಹಲವೆಡೆ ಮಳೆ ಸಂಭವ

| Published : Mar 18 2024, 02:41 PM IST

Karnataka Rain
ಶುಭಸುದ್ದಿ: ವಾರದಲ್ಲಿ ರಾಜ್ಯದ ಹಲವೆಡೆ ಮಳೆ ಸಂಭವ
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಲಿನ ತಾಪ ಹೆಚ್ಚಾಗಿ ನೀರಿಗೆ ಪರದಾಡುತ್ತಿರುವ ಬೆನ್ನಲ್ಲೇ ಹಗುರ ಮಳೆ ಮುನ್ಸೂಚನೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ ಒಂದು ವಾರದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಸಿಲಿನ ತಾಪ ಹೆಚ್ಚಾಗಿ ರಾಜ್ಯದಲ್ಲಿ ಜನ-ಜಾನುವಾರುಗಳು ತತ್ತರಿಸಿ ಹೋಗುತ್ತಿವೆ. ಕುಡಿಯುವ ನೀರಿಗೆ ಹಾಹಾಕಾರ ಕಾಣಿಸಿಕೊಂಡಿರುವ ಸಂದರ್ಭದಲ್ಲಿ ಮಳೆ ಬೀಳುವ ಮುನ್ಸೂಚನೆಯನ್ನು ಇಲಾಖೆ ನೀಡಿದೆ.

ಒಡಿಶಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗದಲ್ಲಿ ಮಳೆಯಾಗುತ್ತಿದೆ. ಇದರ ಪರಿಣಾಮದಿಂದ ಮುಂದಿನ 24 ಗಂಟೆಯಲ್ಲಿ ಬೀದರ್‌, ಧಾರವಾಡ, ಕಲಬುರಗಿ, ವಿಜಯಪುರ ಸೇರಿದಂತೆ ವಿವಿಧ ಭಾಗದಲ್ಲಿ ಮಳೆಯಾಗಲಿದೆ. 

ಮಾ.20 ರಿಂದ 24 ವರೆಗೆ ರಾಜಧಾನಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಏಪ್ರಿಲ್‌ನಲ್ಲಿಯೂ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಮೇ ಅಂತ್ಯದ ವೇಳೆಗೆ ಎಲ್‌ನಿನೋ ಪ್ರಭಾವ ಕಡಿಮೆಯಾಗಲಿದ್ದು, ಮುಂಬರುವ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞ ಪ್ರಸಾದ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

2-3 ಡಿಗ್ರಿ ಗರಿಷ್ಠ ಉಷ್ಣಾಂಶ ಹೆಚ್ಚಳ: ಬಾಗಲಕೋಟೆ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶದಲ್ಲಿ ಹೆಚ್ಚಳವಾಗಲಿದೆ. 

ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಪ್ಪಳದಲ್ಲಿ ಅತಿ ಹೆಚ್ಚು 39.5 ಡಿಗ್ರಿ ಸೆಲ್ಶಿಯಸ್‌ ಗರಿಷ್ಠ ಉಷ್ಣಾಂಶ, ಶಿವಮೊಗ್ಗದಲ್ಲಿ 19 ಡಿಗ್ರಿ ಸೆಲ್ಶಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.