ಸಾರಾಂಶ
ಸರ್ಕಾರದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕುಸಿದಿದೆ. ಗ್ಯಾರಂಟಿಗೆ ಹಣ ಬಿಡುಗಡೆ ಮಾಡದೇ ಇರುವುದು ದಿವಾಳಿಗೆ ಸಾಕ್ಷಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಹುಬ್ಬಳ್ಳಿ : ಸರ್ಕಾರದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕುಸಿದಿದೆ. ಗ್ಯಾರಂಟಿಗೆ ಹಣ ಬಿಡುಗಡೆ ಮಾಡದೇ ಇರುವುದು ದಿವಾಳಿಗೆ ಸಾಕ್ಷಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹನಾ ಶಕ್ತಿ ಕಳೆದುಕೊಂಡಿದ್ದಾರೆ. ನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಎಂದು ಸಲಹೆ ನೀಡಿದರೆ, ಅದಕ್ಕೂ ಅವರಿಗೆ ಕೋಪ ಬರುತ್ತದೆ. ಎಂದರೆ ಅವರು ಸಹನಾ ಶಕ್ತಿ ಕಳೆದುಕೊಂಡಿದ್ದಾರೆ ಎಂದರ್ಥ. ನಾವು ರಾಜ್ಯದ ಬಜೆಟ್ ಬಗ್ಗೆ ಮಾತನಾಡಿದರೆ, ಕೇಂದ್ರದ ಬಜೆಟ್ ಬಗ್ಗೆ ಮಾತನಾಡುತ್ತಾರೆ. ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಾರೆ ಎಂದು ಕಿಡಿ ಕಾರಿದರು.
ನಾವು ಪೂರಕ ಬಜೆಟ್ ಮಂಡನೆ ಮಾಡಿದ್ದೆವು. 2 ವರ್ಷದಿಂದ ಇವರು ಕೊರತೆ ಬಜೆಟ್ ಮಂಡಿಸುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಬಂಡವಾಳ ವೆಚ್ಚ ಹೆಚ್ಚಾಗಿಲ್ಲ, ಸಾಲ ಹೆಚ್ಚಾಗಿದೆ. 2 ವರ್ಷದಲ್ಲಿ ₹1.5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದರೆ ಅವರ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದ್ದಕ್ಕೆ ಸಾಕ್ಷಿಯಾಗಿದೆ ಎಂದರು.
ಎಸ್ ಸಿಪಿ/ಟಿಎಸ್‌ಪಿಗೆ ಬಜೆಟ್‌ನಲ್ಲಿ ಮೀಸಲಿರಿಸಿದ್ದ ₹25 ಸಾವಿರ ಕೋಟಿ ಹಣ ಬೇರೆ, ಬೇರೆ ಯೋಜನೆಗೆ ಬಳಕೆ ಆಗಿದೆ. ಅಭಿವೃದ್ಧಿಗೆ ಹಣದ ಕೊರತೆ ಆಗಿದೆ. ಓಬಿಸಿ, ಎಸ್ಸಿ, ಎಸ್ಟಿ ಹಾಗೂ ಇತರ ಜನಸಾಮಾನ್ಯರ ಕಲ್ಯಾಣ ಅನುದಾನ ಬಿಡುಗಡೆ ಆಗಿಲ್ಲ. ವಾಲ್ಮೀಕಿ ನಿಗಮದ ಹಗರಣ ಆದ ನಂತರ ಆ ಇಲಾಖೆಯಲ್ಲಿ ಏನು ಆಗುತ್ತಿದೆ ಎಂಬುದನ್ನು ತಿಳಿಸುತ್ತಿಲ್ಲ. ಇದರ ವಿರುದ್ಧ ಹೋರಾಟ ನಡೆಸಲಾಗುವುದು. ಪಕ್ಷದಲ್ಲಿ ಚರ್ಚಿಸಿ ಹೋರಾಟದ ದಿನಾಂಕ ನಿಗದಿಪಡಿಸಲಾಗುವುದು ಎಂದರು.