ಸಾರಾಂಶ
ನಾಗರಿಕರ ಸುರಕ್ಷತೆಗಾಗಿ ಯೋಧರ ಹರಿಸುವ ಬೆವರು ಹಾಗೂ ರಕ್ತದ ಕಾರಣದಿಂದಾಗಿ ದೇಶ ಸುಭದ್ರವಾಗಿದೆ. ದೇಶ ಕಾಯುವ ಯೋಧರ ಸೇವೆ ಅತ್ಯಂತ ಶ್ಲಾಘನೀಯ. ಅವರನ್ನು ನಾವು ಎಂದಿಗೂ ಸ್ಮರಿಸುತ್ತಿರಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದ್ದಾರೆ.
ಬೆಂಗಳೂರು : ನಾಗರಿಕರ ಸುರಕ್ಷತೆಗಾಗಿ ಯೋಧರ ಹರಿಸುವ ಬೆವರು ಹಾಗೂ ರಕ್ತದ ಕಾರಣದಿಂದಾಗಿ ದೇಶ ಸುಭದ್ರವಾಗಿದೆ. ದೇಶ ಕಾಯುವ ಯೋಧರ ಸೇವೆ ಅತ್ಯಂತ ಶ್ಲಾಘನೀಯ. ಅವರನ್ನು ನಾವು ಎಂದಿಗೂ ಸ್ಮರಿಸುತ್ತಿರಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಹವ್ಯಕ ಸಮ್ಮೇಳನದ ಮೂರನೇ ದಿನವಾದ ಭಾನುವಾರದಂದು 81 ಜನ ಹಾಲಿ ಮತ್ತು ಮಾಜಿ ಯೋಧರಿಗೆ ‘ಹವ್ಯಕ ದೇಶರತ್ನ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಯೋಧರಿಗೆ ದೇಶರತ್ನ ಪುರಸ್ಕಾರ ನೀಡಿ ಅವರ ಜವಾಬ್ದಾರಿಯನ್ನು ಹೆಚ್ಚಿಸುವುದರ ಜೊತೆಗೆ ಅವರು ಕರ್ತವ್ಯವನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಲು ಇದು ಪ್ರೋತ್ಸಾಹ ನೀಡುತ್ತದೆ. ಶಿಸ್ತು, ಶ್ರಮ, ಸಮಯಪಾಲನೆ, ಆತ್ಮವಿಶ್ವಾಸ, ನಿರ್ಭಯತೆ ಇದು ವಿವೇಕಾನಂದರು ಹೇಳಿದ ಪಂಚರತ್ನಗಳು. ಅದನ್ನು ನಾವು ಸೈನಿಕರಲ್ಲಿ ಕಾಣಬಹುದು ಎಂದರು.
ಸಮ್ಮೇಳನದಲ್ಲಿ ಕೃಷಿ ಸಾಧಕರು, ಶಿಕ್ಷಕರು, ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ. ಇದು ಅನೇಕರಿಗೆ ಉತ್ತಮ ಕೆಲಸ ಮಾಡಲು ಪ್ರೋತ್ಸಾಹಿಸುತ್ತದೆ ಎಂದು ನ್ಯಾಯಮೂರ್ತಿ ಹೇಳಿದರು.
ಏಷಿಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಮಾತನಾಡಿ, ಜಾತಿಯ ಪಿಡುಗು ಸೈನ್ಯದಲ್ಲಿಲ್ಲ. ಹುತಾತ್ಮರಾದ ಯೋಧರಲ್ಲಿ ಜಾತಿ ಹುಡುಕುವ ಕೆಟ್ಟ ಕಾರ್ಯವನ್ನು ಕೆಲವರು ಮಾಡುತ್ತಾರೆ. ಅಂತಹ ಮನಸ್ಥಿತಿಯವರಿಗೆ ಈ ಕಾರ್ಯಕ್ರಮ ಸ್ಪಷ್ಟ ಉದಾಹರಣೆ. ಸಾವಿರಾರು ಸಂಖ್ಯೆಯಲ್ಲಿ ಹವ್ಯಕ ಬ್ರಾಹ್ಮಣ ಸಮುದಾಯದವರು ಯೋಧರಾಗಿ ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ. ದೇಶದ ಗಡಿಯಲ್ಲಿ ಒಂದು ದಿನ ನಿಂತು ದೇಶ ಕಾಯ್ದರೂ ಅವರು ದೇಶದ ಗೌರವಕ್ಕೆ ಅರ್ಹರು. ಏಕೆಂದರೆ ಗಡಿ ಕಾಯುವುದು ಅತ್ಯಂತ ಕಷ್ಟದ ಕಾರ್ಯ ಎಂದರು. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಟಿ. ಮಡಿಯಾಲ್, ಶಿಮೂಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ ಉಪಸ್ಥಿತರಿದ್ದರು.