''ಇದರಿಂದ ಮಾತ್ರವೇ ಹಠಾತ್‌ ಸಾವು ತಪ್ಪಿಸಲು ಸಾಧ್ಯ ''

| N/A | Published : Jul 11 2025, 11:04 AM IST

low blood pressure heart attack risk truth and prevention tips

ಸಾರಾಂಶ

‘ಹಾಸನದಲ್ಲಿನ ಕಳೆದೆರಡು ತಿಂಗಳಲ್ಲಿ ಉಂಟಾಗಿರುವ 20 ಹೃದಯಾಘಾತದ ಸಾವುಗಳಲ್ಲಿ ಶೇ.75 ರಷ್ಟು ಮಂದಿ ಸಾವಿಗೆ ಜೀವನಶೈಲಿ ಹಾಗೂ ಅನಾರೋಗ್ಯದ ಹಿನ್ನೆಲೆ ಕಾರಣ

  ಬೆಂಗಳೂರು :  ‘ಹಾಸನದಲ್ಲಿನ ಕಳೆದೆರಡು ತಿಂಗಳಲ್ಲಿ ಉಂಟಾಗಿರುವ 20 ಹೃದಯಾಘಾತದ ಸಾವುಗಳಲ್ಲಿ ಶೇ.75 ರಷ್ಟು ಮಂದಿ ಸಾವಿಗೆ ಜೀವನಶೈಲಿ ಹಾಗೂ ಅನಾರೋಗ್ಯದ ಹಿನ್ನೆಲೆ ಕಾರಣ. ಇದು ಇಡೀ ರಾಜ್ಯಕ್ಕೆ ಅನ್ವಯವಾಗುವ ಸಂದೇಶವಾಗಿದ್ದು, ಎಲ್ಲರೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವ ಮೂಲಕ ಹಠಾತ್‌ ಸಾವಿನಿಂದ ಪಾರಾಗಬಹುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

ಹಾಸನದಲ್ಲಿ ಮೇ ಹಾಗೂ ಜೂನ್‌ನಲ್ಲಿ ಸಂಭವಿಸಿದ್ದ ಹಠಾತ್‌ ಸಾವಿನ ಕುರಿತ ತಜ್ಞರ ಸಮಿತಿ ವರದಿ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೃತರಾದವರಲ್ಲಿ 75% ಕ್ಕಿಂತ ಹೆಚ್ಚು ಮಂದಿ ಒಂದಕ್ಕಿಂತ ಹೆಚ್ಚು ಹೃದಯದ ಅನಾರೋಗ್ಯಕ್ಕೆ ಕಾರಣವಾಗಬಹುದಾದ ಅಪಾಯಕಾರಿ ಹಿನ್ನೆಲೆ ಹೊಂದಿದ್ದರು. ಇವುಗಳಲ್ಲಿ ಮಧುಮೇಹ, ಸ್ಥೂಲಕಾಯ, ಮದ್ಯಪಾನ, ಧೂಮಪಾನ, ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಹೊಂದಿದ್ದರು. ಈ ಪೈಕಿ 6 ಮಂದಿ ಆಟೋ ಮತ್ತು ಕ್ಯಾಬ್ ಚಾಲಕರಿದ್ದು ಸರಿಯಾದ ಸಮಯದಲ್ಲಿ ಊಟ ಮಾಡದಿರುವುದು, ಸರಿಯಾಗಿ ನಿದ್ರೆ ಮಾಡದಿರುವುದು. ಒತ್ತಡದಲ್ಲಿ ಕೆಲಸ ಮಾಡುವುದು ಹಠಾತ್ ಸಾವಿಗೆ ಕಾರಣವಾಗಿರಬಹುದು. ಹೀಗಾಗಿ ಹಾಸನ ಮಾತ್ರವಲ್ಲದೆ ಇಡೀ ರಾಜ್ಯದ ಜನತೆ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಮ್‌ ತರಬೇತುದಾರರಿಗೆ ಚಿಕಿತ್ಸೆ ತರಬೇತಿ:

ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ 20 ಮಂದಿಯಲ್ಲಿ 6 ಮಂದಿ ಚಾಲಕರಿರುವ ಹಿನ್ನೆಲೆಯಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಹೃದಯ ಮತ್ತು ಆರೋಗ್ಯ ತಪಾಸಣೆ ಮಾಡಿಸಲು ನಿರ್ಧರಿಸಿದ್ದೇವೆ. ಜತೆಗೆ ರಾಜ್ಯದಲ್ಲಿ ಚಿಕ್ಕ ವಯಸ್ಸಿನವರು ಹಠಾತ್‌ ಸಾವಿಗೀಡಾಗುವುದನ್ನು ತಡೆಯಲು 15 ವರ್ಷದ ಮಕ್ಕಳಿಗೆ ಹೃದಯ ತಪಾಸಣೆ ಮಾಡುತ್ತೇವೆ. ಇದರಿಂದ ವಂಶವಾಹಿಯಾಗಿ ಏನಾದರೂ ಸಮಸ್ಯೆ ಇದ್ದರೆ ಗುರುತಿಸಿ ಸೂಕ್ತ ಕ್ರಮ ಕೈಗೊಂಡು ಮಾರ್ಗದರ್ಶನ ನೀಡಿ, ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಉಳಿದಂತೆ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಜಿಮ್‌ಗಳಲ್ಲಿನ ದೈಹಿಕ ತರಬೇತುದಾರರಂತಹ ನಿರ್ದಿಷ್ಟ ಗುಂಪುಗಳಿಗೆ ಸಿಪಿಆರ್ ತರಬೇತಿ ನೀಡಲಾಗುವುದು. ಇನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC) ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (CHC) ಹೃದಯ ಜ್ಯೋತಿ ಯೋಜನೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು ತಿಳಿಸಿದರು.

ಜೀವನಶೈಲಿ ಬದಲಾವಣೆಗೆ ಒತ್ತು ನೀಡಿ:

ಹೃದ್ರೋಗ ಸಮಸ್ಯೆಗೆ ಒತ್ತಡದ ಕೆಲಸ, ನಿದ್ರಾಹೀನತೆ, ಅನಿಯಮಿತ ಊಟ, ಮತ್ತು ತಪ್ಪು ಆಹಾರ ಪದ್ಧತಿಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ ಪ್ರಮುಖ ಕಾರಣ. ಹೀಗಾಗಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಅನಿವಾರ್ಯ. ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿರ್ವಹಣೆಗೆ ಒತ್ತು ನೀಡಬೇಕು ಎಂದು ದಿನೇಶ್ ಗುಂಡೂರಾವ್ ಸಲಹೆ ನೀಡಿದರು.

Read more Articles on