ಇಂದು ರಾಜ್ಯದ 13 ಜಿಲ್ಲೆಗಳಲ್ಲಿ ಭಾರಿ ಮಳೆ ಸಂಭವ

| Published : May 13 2024, 11:15 AM IST / Updated: May 13 2024, 11:16 AM IST

tamilnadu  rain

ಸಾರಾಂಶ

ಮುಂದಿನ 24 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರು :  ಮುಂದಿನ 24 ಗಂಟೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ನ ಎಚ್ಚರಿಕೆ ನೀಡಲಾಗಿದೆ.

ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಶನಿವಾರದಿಂದ ಕರಾವಳಿ ಮತ್ತು ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂದಿನ 24 ಗಂಟೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರಾವಾಡ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ, ರಾಮನಗರ ಹಾಗೂ ಶಿವಮೊಗ್ಗದಲ್ಲಿ 6 ರಿಂದ 11 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ.

ಮೇ 14 ರಂದು ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರಾವಾಡ, ಗದಗ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ನ ಮುನ್ಸೂಚನೆ ನೀಡಲಾಗಿದೆ.

ಮೇ 19ರವರೆಗೆ ರಾಜ್ಯದ ಬಹುತೇಕ ಸ್ಥಳದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಗಾಳಿಯು 30 ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ. ಗರಿಷ್ಠ ಉಷ್ಣಾಂಶದಲ್ಲಿ 2 ರಿಂದ 4 ಡಿಗ್ರಿ ಸೆಲ್ಸಿಯಸ್‌ ನಷ್ಟು ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹುಬ್ಬಳ್ಳಿಯಲ್ಲಿ 8 ಸೆಂ.ಮೀ. ಮಳೆ:

ಭಾನುವಾರ ಬೆಳಗ್ಗೆ 8.30 ಕೊನೆಗೊಂಡ ಹವಾಮಾನ ಇಲಾಖೆಯ ವರದಿ ಪ್ರಕಾರ ಹುಬ್ಬಳ್ಳಿಯಲ್ಲಿ ಅತಿ ಹೆಚ್ಚು 8 ಸೆಂ.ಮೀ ಮಳೆಯಾಗಿದ್ದು, ಉಳಿದಂತೆ ಸುಳ್ಯದಲ್ಲಿ 6, ಹಳಿಯಾಳ, ಸಂಕೇಶ್ವರ, ಜಯಪುರದಲ್ಲಿ ತಲಾ 5, ಬೆಳಗಾವಿ 4, ಕುಕನೂರು, ಮುನಿರಾಬಾದ್‌, ನಿಪ್ಪಾಣಿ, ಬಂಡೀಪುರ, ಭಾಗಮಂಡಳ, ಪೊನ್ನಂಪೇಟೆಯಲ್ಲಿ ತಲಾ 3, ಗೋಕಾಕ್‌, ಶಿಗ್ಗಾವಿ, ಕಿರವತ್ತಿ, ಕೋಟ, ಕಳಸ, ನಾಯಕನಹಟ್ಟಿ ತಲಾ 2, ಹಾವೇರಿ, ವಿಜಯಪುರ, ಬೆಳಗಾವಿ, ಲೋಂಡಾ, ಹರಪನಹಳ್ಳಿ, ಕಡೂರು, ಹಿರೇಕೆರೂರು, ಇಂಡಿ, ದೇವದುರ್ಗ, ಶಿರಾದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಕಲಬುರಗಿಯಲ್ಲಿ ರಾಜ್ಯದಲ್ಲೇ ಅಧಿಕ 40 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.