ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಭಾನುವಾರವೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು : ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಭಾನುವಾರವೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೋರು ಮಳೆಯಾಗುವ ಮುನ್ಸೂಚನೆ
ಭಾನುವಾರ ಚಾಮರಾಜನಗರ, ಮೈಸೂರು, ಕೋಲಾರ, ಕೊಡಗು ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಮುನ್ಸೂಚನೆ ಇದೆ. ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು ಹಾಗೂ ಉತ್ತರ ಒಳನಾಡಿನ ವಿಜಯಗರ, ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ.
ಉಡುಪಿಯ ಬ್ರಹ್ಮಾವರದಲ್ಲಿ ಗರಿಷ್ಠ 10 ಸೆಂ.ಮೀ. ಮಳೆ
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿಯ ಬ್ರಹ್ಮಾವರದಲ್ಲಿ ಗರಿಷ್ಠ 10 ಸೆಂ.ಮೀ. ಮಳೆಯಾಗಿದೆ. ಧರ್ಮಸ್ಥಳ, ಹಾಸನದ ಕೊಣನೂರಿನಲ್ಲಿ ತಲಾ 8 ಸೆಂ.ಮೀ, ಹುಬ್ಬಳ್ಳಿ, ಕುಶಾಲನಗರ, ಪೊನ್ನಂಪೇಟೆಯಲ್ಲಿ ತಲಾ 7 ಸೆಂ.ಮೀ. ಅರಕಲಗೂಡು, ಮಂಕಿ, ಕೊಲ್ಲೂರಿನಲ್ಲಿ ತಲಾ 6 ಸೆಂ.ಮೀ, ಕೋಟ, ಬೆಳ್ತಂಗಡಿ, ಎಚ್.ಡಿ ಕೋಟೆ, ಶ್ರೀರಾಮಪುರ, ಸರಗೂರಿನಲ್ಲಿ ತಲಾ 5 ಸೆಂ.ಮೀ., ಸೋಮವಾರಪೇಟೆ, ಕೃಷ್ಣರಾಜಪೇಟೆಯಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

