6 ಜಿಲ್ಲೆಗಳಲ್ಲಿ ಭರ್ಜರಿ ಮಳೆ : ಒಂದೇ ಕುಟುಂಬದ ಮೂವರು ಸೇರಿ ಸಿಡಿಲಿಗೆ ನಾಲ್ವರು ಬಲಿ

| Published : Sep 24 2024, 12:00 PM IST

rain thunder kolkata west bengal weather

ಸಾರಾಂಶ

ಸೋಮವಾರ ರಾಜ್ಯದ ಆರು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ ಮತ್ತು ಸಿಡಿಲಿನಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಯಾದಗಿರಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಧಾರವಾಡ, ಕಲಬುರಗಿ ಮತ್ತು ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಹಾನಿ ಸಂಭವಿಸಿದೆ.

ಬೆಂಗಳೂರು : ರಾಜ್ಯದ ಆರು ಜಿಲ್ಲೆಗಳಲ್ಲಿ ಸೋಮವಾರ ಸುರಿದ ದಿಢೀರ್‌ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಯಾದಗಿರಿಯಲ್ಲಿ ಸಿಡಿಲಿಗೆ ನಾಲ್ವರು ಬಲಿಯಾಗಿದ್ದಾರೆ. 

ಯಾದಗಿರಿ, ಕಲಬುರಗಿ, ಚಿಕ್ಕಮಗಳೂರಿನ ಶೃಂಗೇರಿ, ಧಾರವಾಡ, ಕೊಪ್ಪಳ, ಗದಗ ಮತ್ತಿತರ ಜಿಲ್ಲೆಗಳಲ್ಲಿ ಸಂಜೆ ಸಿಡಿಲಬ್ಬರದ ಜತೆಗೆ ಭಾರೀ ಮಳೆಯಾಗಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಸಮಸ್ಯೆಯಾದರೆ, ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಸಿಡಿಲಬ್ಬರಕ್ಕೆ ಎರಡು ಜಾನುವಾರು ಹಾಗೂ ಗದಗ ಜಿಲ್ಲೆಯ ಡಂಬಳ ಹೋಬಳಿಯಲ್ಲಿ ನಾಲ್ಕು ಕುರಿಗಳು ಮೃತಪಟ್ಟಿವೆ. ಕಲಬುರಗಿಯಲ್ಲೂ ಸತತ 2 ಗಂಟೆ ಭರ್ಜರಿ ಮಳೆಯಾಗಿದ್ದು, ಜನ ಪರದಾಡಬೇಕಾಯಿತು.

ಇನ್ನು ಯಾದಗಿರಿ ನಗರ ಸುತ್ತಮುತ್ತ ಸುಮಾರು ಅರ್ಧಗಂಟೆ ಕಾಲ ಭಾರೀ ಮಳೆಯಾಗಿದ್ದು, ಜೀನಕೇರಾ ತಾಂಡಾದಲ್ಲಿ ಸಿಡಿಲು ಬಡಿದು ಚೇನು (22), ಕಿಶನ್ (30), ಸುಮಿಬಾಯಿ (30) ಹಾಗೂ ನೇನು (18) ಮೃತಪಟ್ಟಿದ್ದಾರೆ. ಆರು ಮಂದಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಮಳೆಯಿಂದ ರಕ್ಷಣೆ ಪಡೆಯಲು ಹೊಲದಲ್ಲಿದ್ದ ಮರಗಮ್ಮ ದೇವಸ್ಥಾನದೊಳಗೆ ಆಶ್ರಯಕ್ಕೆಂದು ತೆರಳಿದಾಗ ಸಿಡಿಲು ಬಡಿದು ಈ ದುರ್ಘಟನೆ ಸಂಭವಿಸಿದೆ.