ಸಾರಾಂಶ
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಗುಹೆಯೊಂದರಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ರಷ್ಯಾ ಕುಟುಂಬವನ್ನು ಭಾರತದಿಂದ ಗಡೀಪಾರು ಮಾಡುವುದರಿಂದ ಕೇಂದ್ರ ಸರ್ಕಾರವನ್ನು ಹೈಕೋರ್ಟ್ ತಾತ್ಕಾಲಿಕವಾಗಿ ನಿರ್ಬಂಧಿಸಿದೆ
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಗುಹೆಯೊಂದರಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ರಷ್ಯಾ ಕುಟುಂಬವನ್ನು ಭಾರತದಿಂದ ಗಡೀಪಾರು ಮಾಡುವುದರಿಂದ ಕೇಂದ್ರ ಸರ್ಕಾರವನ್ನು ಹೈಕೋರ್ಟ್ ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ತನ್ನ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಭಾರತದಿಂದ ಬೇರೆ ಯಾವುದೇ ದೇಶಕ್ಕೆ ಹಠಾತ್ ಗಡೀಪಾರು ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಇಸ್ರೇಲ್ ಮೂಲದ ಪತಿ ಡ್ರೋರ್ ಗೋಲ್ಡ್‌ಸ್ಟೈನ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್. ಸುನೀಲ್ ದತ್‌ರ ಪೀಠ ಈ ಆದೇಶ ನೀಡಿದೆ.
ಪ್ರಕರಣದ ಕೂಲಂಕಷ ಪರಿಶೀಲನೆಗೆ ಸಮಗ್ರ ವಿಚಾರಣೆಯ ಅಗತ್ಯವಿದೆ. ಸದ್ಯ ಮಕ್ಕಳ ಬಗ್ಗೆ ಸಮರ್ಪಕ ದಾಖಲೆಗಳು ಲಭ್ಯವಿಲ್ಲ. ಇದರಿಂದ ಅವರ ದಾಖಲೆಗಳನ್ನು ದೃಢೀಕರಣವಾಗುವರೆಗೆ ಗಡೀಪಾರು ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಬಾರದು. ಅರ್ಜಿಗೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಆ.18ಕ್ಕೆ ಮುಂದೂಡಿದೆ.
ಪ್ರಕರಣವೇನು?:
ಗೋಕರ್ಣದ ರಾಮತೀರ್ಥ ಬೆಟ್ಟದ ಮೇಲಿರುವ ಗುಹೆಯಲ್ಲಿ ಜು.11ರಂದು ರಷ್ಯಾದ ಮಹಿಳೆ ನೀನಾ ಕುಟಿನಾ (40) ಮತ್ತು ಆಕೆಯ ಇಬ್ಬರು ಪುತ್ರಿಯರು ಕಂಡು ಬಂದಿದ್ದರು. 2018ರಲ್ಲಿ ಬ್ಯುಸಿನೆಸ್ ವೀಸಾದಲ್ಲಿ ರಷ್ಯಾದಿಂದ ಭಾರತಕ್ಕೆ ಬಂದಿದ್ದ ಅವರು ಗೋವಾದಲ್ಲಿ ನೆಲೆಸಿದ್ದರು. ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳಿಗೆ ಆಕರ್ಷಿತರಾಗಿದ್ದ ಕುಟಿನಾ, ಇತ್ತೀಚೆಗೆ ಮಕ್ಕಳ ಸಹಿತ ಗೋಕರ್ಣಕ್ಕೆ ಬಂದು, ಕಾಡಿನ ಗುಹೆಯಲ್ಲಿ ಏಕಾಂತದಲ್ಲಿ ವಾಸಿಸುತ್ತಿದ್ದರು.
ಇದೀಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕುಟಿನಾ ಪತಿ, ತಾನು 2017ರಿಂದ 2024 ರವರೆಗೆ ಪತ್ನಿ ಮತ್ತು ಮಕ್ಕಳೊಂದಿಗೆ ಗೋವಾದಲ್ಲಿ ನೆಲೆಸಿದ್ದೆ. 2024ರ ಅಂತ್ಯದಲ್ಲಿ ಪತ್ನಿ ಮಕ್ಕಳೊಂದಿಗೆ ಗೋವಾದಿಂದ ತಪ್ಪಿಸಿಕೊಂಡಿದ್ದರು. ಇತ್ತೀಚೆಗೆ ಗೋಕರ್ಣದ ಗುಹೆಯಲ್ಲಿ ಪತ್ತೆಯಾಗಿದ್ದಾರೆ. ಹೀಗಾಗಿ ಮಕ್ಕಳ ಭೇಟಿಗೆ ಅವಕಾಶ ಕಲ್ಪಿಸಬೇಕು. ಮಕ್ಕಳ ದಾಖಲೆಗಳು ದೃಢಪಡುವವರೆಗೆ ಗಡೀಪಾರು ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು. ಮಕ್ಕಳನ್ನು ಬಂಧನ ಕೇಂದ್ರದಿಂದ ಬಿಡುಗಡೆಗೊಳಿಸಿ ತನ್ನ ಸುಪರ್ದಿಗೆ ಹಸ್ತಾಂತರಿಸಲು ಆದೇಶಿಸಬೇಕು ಎಂದು ಕೋರಿದ್ದಾರೆ.